ಬೆಂಗಳೂರು : ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ನೂತನ ಸಿಎಂ ಬಸವರಾಜ ಬೊಮ್ಮಾಯಿ ಬಂಪರ್ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ತಮ್ಮ ಸರ್ಕಾರದ ಮೊದಲ ನಿರ್ಣಯಗಳನ್ನು ಪ್ರಕಟಿಸಿದ್ದಾರೆ.
ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಹಾಗೂ ಅವರು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂದು ನೂತನ ಶಿಷ್ಯ ವೇತನ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಇದಕ್ಕಾಗಿ ಸರ್ಕಾರ 1 ಸಾವಿರ ಕೋಟಿ ಹಣವನ್ನು ಮೀಸಲಿರಿಸಲಿದೆ. ಈ ಯೋಜನೆಯ ರೂಪು ರೇಷೆಗಳು ಇನ್ನೂ ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ.
ಇದರೊಂದಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ನೀಡುತ್ತಿರುವ ವೃದ್ಧಾಪ್ಯ ವೇತನವನ್ನು 1000 ರೂಪಾಯಿಂದ 1200 ರೂಪಾಯಿಗಳಿಗೆ ಏರಿಸುವುದಾಗಿ ಘೋಷಿಸಿರುವ ಬೊಮ್ಮಾಯಿ, ಇದರಿಂದ 35 ಲಕ್ಷ ಫಲಾನುಭವಿಗಳಿಗೆ ಲಾಭ ಉಂಟಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ 863 ಕೋಟಿ ಹೊರೆಯಾಗಲಿದೆ.
ವಿಧವಾ ವೇತನವನ್ನೂ ನೂತನ ಮುಖ್ಯಮಂತ್ರಿಗಳು ಪರಿಷ್ಕರಿಸಿದ್ದು 600 ರಿಂದ 800 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರಿಂದ 17.25 ಫಲಾನುಭವಿಗಳಿಗೆ ಪ್ರಯೋಜನವಾಗಲಿದ್ದು, 414 ಕೋಟಿ ಹೆಚ್ಚುವರಿ ವೆಚ್ಚ ತಗುಲಲಿದೆ.
ಇನ್ನು ವಿಕಲಚೇತನರಿಗೆ ನೀಡುತ್ತಿರುವ 600 ರೂಪಾಯಿ ಮಾಸಿಕ ವೇತನವನ್ನು 800ಕ್ಕೆ ಏರಿಸಲಾಗಿದೆ. ಇದರಿಂದ 3.66 ಸಾವಿರ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, 90 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೊಕ್ಕಸಕ್ಕೆ ಬೀಳಲಿದೆ.
ಈ ಎಲ್ಲಾ ಯೋಜನೆಗಳ ಮೂಲಕ ರೈತರು ಹಾಗೂ ಮಧ್ಯಮ ಮತ್ತು ಬಡ ವರ್ಗದ ಮಂದಿಯ ಹಿತವೇ ನನಗೆ ಮುಖ್ಯ ಅನ್ನುವ ಸಂದೇಶವನ್ನು ನೂತನ ಮುಖ್ಯಮಂತ್ರಿಗಳು ರವಾನಿಸಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕು ಅನ್ನುವ ನಿಟ್ಟಿನ ಕೆಲಸವನ್ನು ಬೊಮ್ಮಾಯಿ ಪ್ರಾರಂಭಿಸಿದ್ದಾರೆ. ಒಂದು ವೇಳೆ ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬೊಮ್ಮಾಯಿ ಅವರೇ ಸಿಎಂ ಆಗಿರುತ್ತಾರೆ.
Discussion about this post