ಬೆಂಗಳೂರು : ಶಿಸ್ತಿನ ಇಲಾಖೆಗೆ ಮಸಿ ಬಳಿಯಲೆಂದೇ ಕೆಲವರು ಖಾಕಿ ತೊಟ್ಟಿರುತ್ತಾರೆ ಅನ್ಸುತ್ತೆ. ಇಲ್ಲವಾದ್ರೆ ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಪಡೆದಿರುವ ಕರ್ನಾಟಕ ಪೊಲೀಸ್ ಇಲಾಖೆಗೆ ಅವಮಾನ ಮಾಡುವ ಕೆಲಸವನ್ನು ಇಂತವರು ಮಾಡುತ್ತಿರಲಿಲ್ಲ.
ಹೀಗೆ ಲೇಡಿ ಸಿಂಗಂ ಆಗಲು ಹೋದ ಮಹಿಳಾ ಇನ್ಸ್ ಪೆಕ್ಟರ್ ಮಾಡಿದ ಪಾಪದ ಕೆಲಸಕ್ಕೆ ಅಮಾನತುಗೊಂಡಿದ್ದಾರೆ. ಜೊತೆಗೆ ಇದಕ್ಕೆ ಸಾಥ್ ನೀಡಿದ ಪಿಎಸ್ಐ ನನ್ನು ಕೂಡಾ ಮನೆಗೆ ಕಳುಹಿಸಲಾಗಿದೆ.
ಜುಲೈ 14 ರಂದು ರಾತ್ರಿ 8 ಗಂಟೆ ಸುಮಾರಿಗೆ ಗೊರಗುಂಟೆ ಪಾಳ್ಯದ ತಮ್ಮ ಮನೆ ಮುಂದೆ ಕಡಲೆಕಾಯಿ ಮಾರಿ ವ್ಯಾಪಾರ ನಡೆಸುತ್ತಿದ್ದ ಶಿವರಾಜ್ ಹಾಗೂ ನಾಗೇಂದ್ರ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಗಸ್ತು ಬಂದ ಇನ್ಸ್ ಪೆಕ್ಟರ್ ಪಾರ್ವತಮ್ಮ ( RMC Yard police inspector Parvathamma ) ಹಾಗೂ ಪಿಎಸ್ಐ ಅಂಜಿನಪ್ಪ, ನೀವು ಗಾಂಜಾ ಸೇವಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇಲ್ಲ ಎಂದು ಹೇಳಿ ನಿರಾಕರಿಸಿದರೂ ಕೇಳಲಿಲ್ಲ. ಬಳಿಕ ಕಾಸಿಗೆ ಬೇಡಿಕೆ ಇಟ್ಟಿದ್ದಾರೆ. ಕಾಸಿಲ್ಲ ಅಂದಾಗ ಬಲವಂತವಾಗಿ ಠಾಣೆಗೆ ಕರೆ ತಂದಿದ್ದಾರೆ. ಬಳಿಕ ಇಡೀ ರಾತ್ರಿ ಠಾಣೆಯಲ್ಲೇ ಕೂಡಿ ಹಾಕಿ, ದೌರ್ಜನ್ಯ ನಡೆಸಿದ್ದಾರೆ. ಮರುದಿನ ಬೆಳಗ್ಗೆ ಗಾಂಜಾ ಮಿಶ್ರಣ ಮಾಡಿದ್ದ ಸಿಗರೇಟ್ ಸೇವಿಸುವಂತೆ ಮಾಡಿದ್ದಾರೆ, ಬಳಿಕ ನಾಗೇಂದ್ರ ಮೇಲೆ Petty ಕೇಸ್ ಹಾಕಿ ಮನೆಗೆ ಬಿಟ್ಟು ಕಳುಹಿಸಿದ್ದಾರೆ. ಆದರೆ ಶಿವರಾಜ್ ನನ್ನು ಮೆಡಿಕಲ್ ಟೆಸ್ಟ್ ಗೆ ಕರೆದೊಯ್ದು , ಬಳಿಕ ಡ್ರಗ್ಸ್ ಕೇಸ್ ಜಡಿದು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.
ಜುಲೈ 17 ರಂದು ಜಾಮೀನು ಪಡೆದು ಹೊರ ಬಂದ ಶಿವರಾಜ್, ಸುಳ್ಳು ಪ್ರಕರಣದಿಂದ ನೊಂದು ಮನೆಗೆ ಬಂದವರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಕುಟುಂಬಸ್ಥರು ರಕ್ಷಿಸಿದ್ದಾರೆ. ಈ ವೇಳೆ ನಾಗೇಂದ್ರ ನಡೆದಿರುವ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಈ ಘಟನೆ ಬಗ್ಗೆ ಕುಟುಂಬಸ್ಥರು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರಿಗೆ ದೂರು ಕೊಟ್ಟಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಅರಿತಿ ಡಿಸಿಪಿ ಇಲಾಖಾ ಮಟ್ಟದ ಆಂತರಿಕ ವಿಚಾರಣೆ ನಡೆಸಿದ್ದಾರೆ. ಆಗ ಖಾಕಿಗಳ ಕ್ರೌರ್ಯ ಬಯಲಾಗಿದೆ. ಪಾರ್ವತಮ್ಮ ಹಾಕಿದ್ದ FIR ಪ್ರಕಾರ, ಶಿವರಾಜ್ ನನ್ನು ಕುವೆಂಪು ಸರ್ಕಲ್ ನಿಂದ ಜುಲೈ 14 ರ ಮಧ್ಯಾಹ್ನ 1 ಗಂಟೆಗೆ ಈರಣ್ಣ ಅನ್ನುವ ಕಾನ್ಸ್ ಟೇಬಲ್ ವಶಕ್ಕೆ ಪಡೆದಿದ್ದರು. ಆದರೆ ಶಿವರಾಜ್ ಹಾಗೂ ನಾಗೇಂದ್ರ ಮನೆ ಬಳಿ ಸಿಸಿಟಿವಿ ವಿಡಿಯೋ, ಠಾಣೆ ಬಳಿಯ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಕಥೆಯೇ ಬೇರೆ. ಯಾವಾಗ ಪಾರ್ವತಮ್ಮ ಅಂಡ್ ಗ್ಯಾಂಗ್ ಮಾಡಿರೋದು ಖತರ್ ನಾಕ್ ಕೆಲಸ ಎಂದು ಗೊತ್ತಾಯ್ತೋ ಡಿಸಿಪಿಯವರು ಪೊಲೀಸ್ ಆಯುಕ್ತರಿಗೆ ತನಿಖಾ ವರದಿ ಸಲ್ಲಿಸಿದ್ದಾರೆ. ಡಿಸಿಪಿ ವರದಿ ಆಧರಿಸಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಪಾರ್ವತಮ್ಮ, ಅಂಜಿನಪ್ಪ ಹಾಗೂ ಇಬ್ಬರು ಮುಖ್ಯ ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನು ಪಿಎಸ್ಐ ಅಂಜಿನಪ್ಪನನ್ನು ವಿಚಾರಣೆಗೆ ಕರೆ ತಂದ್ರೆ, ಡಿಸಿಪಿ ಮುಂದೆಯೇ ಮೊಬೈಲ್ ನಲ್ಲಿ ಆಡಿಯೋ ರೆಕಾರ್ಡ್ ಮಾಡ್ತಾ ಕೂತಿದ್ದ. ಈ ಬಗ್ಗೆಯೂ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮಾನತುಗೊಂಡ ಪೊಲೀಸರು ಒಂದಿಷ್ಟು ತಿಂಗಳಲ್ಲಿ ಮತ್ತೆ ಸೇವೆಗೆ ಬರ್ತಾರೆ. ಆದರೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಶಿವರಾಜ್ ಗೆ ಪರಿಹಾರವೇನು. ಶಿವರಾಜ್ ಅನುಭವಿಸಿದ ಅವಮಾನವನ್ನು ಪೊಲೀಸ್ ಇಲಾಖೆ ಹೇಗೆ ಸರಿ ಪಡಿಸಿಕೊಡುತ್ತದೆ…?
Discussion about this post