2017ರಲ್ಲಿ ರೈಲಿನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರಿಗೆ 17.5 ಲಕ್ಷ ರೂಪಾಯಿ ಹಣವನ್ನು ಪಾವತಿಸುವಂತೆ South Central Railway ಇಲಾಖೆಗೆ ಹೈದ್ರಬಾದ್ ಜಿಲ್ಲಾ ಗ್ರಾಹಕರ ನ್ಯಾಯಾಲಯವೊಂದು ಆದೇಶಿಸಿದೆ.
ಹೈದರಾಬಾದ್ ಮೂಲದ ಶೀತಲ್ ಕುಲಕರ್ಣಿ ತಮ್ಮ ಸಂಬಂಧಿಕರ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳುವ ಸಲುವಾಗಿ 2017ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಆಗಸ್ಟ್ 11 ರಂದು ಕಾಚಿಗುಡ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಹತ್ತಿದ ಅವರು ಆಗಸ್ಟ್ 12 ರಂದು ಮನೆಗೆ ತಲುಪಿದ ಬಳಿಕ ಬ್ಯಾಗ್ ತೆರೆದ್ರೆ ಸುಮಾರು 15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 3 ಲಕ್ಷ ಮೌಲ್ಯದ ಬಂಗಾರ ಕಳುವಾಗಿತ್ತು.
ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಶೀತಲ್ ಕುಲಕರ್ಣಿ ದೂರು ಕೂಡಾ ದಾಖಲಿಸಿದರು. ಆದರೆ ಆ ಬಳಿಕ ರೈಲ್ವೆ ಪೊಲೀಸರ ವರ್ತನೆ ತೀವ್ರ ನಿರ್ಲಕ್ಷ್ಯದಿಂದ ಕೂಡಿತ್ತು. ದೊಡ್ಡ ಮೊತ್ತದ ಚಿನ್ನಾಭರಣ ಕಳುವಾಗಿದ್ದರೂ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಬೇಸತ್ತ ಶೀತಲ್ Consumer Protection Act,1986 ಪ್ರಕಾರ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದರು. ಪರಿಹಾರಕ್ಕಾಗಿ ಮನವಿ ಮಾಡಿಕೊಂಡರು.
ಈ ವೇಳೆ ಶೀತಲ್ ಮನವಿಗೆ ಪ್ರತಿಯಾಗಿ ವಾದ ಮಂಡಿಸಿದ ರೈಲ್ವೆ ಇಲಾಖೆ, ಇದು ನಮ್ಮ ನಿರ್ಲಕ್ಷ್ಯದಿಂದ ಆಗಿರುವ ಕೃತ್ಯವಲ್ಲ. ಜೊತೆಗೆ ಮನವಿದಾರರು ರೈಲು ಬೆಂಗಳೂರಿಗೆ ತಲುಪಿದ 6 ಗಂಟೆಗಳ ಬಳಿಕ ದೂರು ದಾಖಲಿಸಿದ್ದಾರೆ. ಮಾತ್ರವಲ್ಲ ಈ ಕಳ್ಳತನ ನಡೆದಿರುವುದು ಅವರ ಬ್ಯಾಗ್ ಗಳು ಅವರ ಸುಪರ್ದಿಯಲ್ಲಿ ಇರುವ ಸಂದರ್ಭದಲ್ಲಿ. ಚಿನ್ನಾಭರಣವಿದ್ದ ಬ್ಯಾಗ್ ರೈಲ್ವೆ ಇಲಾಖೆಯ ಸುಪರ್ದಿಯಲ್ಲಿ ಇರಲಿಲ್ಲ. ಈ ಪ್ರಕರಣದಲ್ಲಿ ಪ್ರಯಾಣಿಕರು ಕಾಚಿಗುಡದಿಂದ ಯಶವಂತಪುರಕ್ಕೆ ಸುರಕ್ಷಿತವಾಗಿ ಪ್ರಯಾಣಿಸುತ್ತಾರೆ ಎಂದು ಒಪ್ಪಂದವಾಗಿದೆ ಆದರೆ ಪ್ರಯಾಣಿಕರು ಸಾಗಿಸುವ ಸರಕುಗಳಿಗೆ ಸುರಕ್ಷತೆಯ ಒಪ್ಪಂದವಾಗಿಲ್ಲ ಎಂದು ಹೇಳಿತು.
ಆದರೆ ಈ ವಾದವನ್ನು ಒಪ್ಪದ ನ್ಯಾಯಾಲಯ, ಪ್ರಯಾಣಿಕರು ಪ್ರಯಾಣಿಸುತ್ತಿದ್ದ ರೈಲ್ವೆ ಬೋಗಿಯಲ್ಲಿ ಸೂಕ್ತ ಭದ್ರತೆ ಇರಲಿಲ್ಲ ಅನ್ನುವುದನ್ನು ಮನಗಂಡಿದೆ.ಇದಕ್ಕೆ ಪೂರಕವಾಗಿ ನಿಗದಿತ ಬೋಗಿಗೆ ರೈಲ್ವೆ ಇಲಾಖೆ ಭದ್ರತೆಗಾಗಿ ನೇಮಿಸಲ್ಪಟ್ಟ ಸಿಬ್ಬಂದಿಯ ವಿವರಗಳನ್ನು ರೈಲ್ವೆ ಇಲಾಖೆ ಸಲ್ಲಿಸಿರಲಿಲ್ಲ.
ಇಡೀ ಪ್ರಕರಣದಲ್ಲಿ ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣಿಸಿದೆ ಎಂದು ಹೇಳಿರುವ ನ್ಯಾಯಾಲಯ ಪ್ರಯಾಣಿಕರಿಗೆ 17.5 ಲಕ್ಷ ಹಣವನ್ನು ಪರಿಹಾರ ರೂಪದಲ್ಲಿ ಪಾವತಿಸುವಂತೆ ಸೂಚಿಸಿದೆ. ಇದರಲ್ಲಿ 14,01,078 ಮೊತ್ತ ಕಳೆದುಕೊಂಡ ಬಂಗಾರ ಮತ್ತು ಬೆಳ್ಳಿಯ ವಸ್ತುಗಳಿಗಾಗಿ, 50 ಸಾವಿರ ಮಾನಸಿಕ ಹಿಂಸೆ ಸಲುವಾಗಿ , 5 ಸಾವಿರ ಕಾನೂನು ಹೋರಾಟದ ಮೊತ್ತ ಮತ್ತು 3 ಲಕ್ಷ ಕಳೆದುಕೊಂಡ ನಗದಿಗೆ ಎಂದು ನ್ಯಾಯಾಲಯ ಹೇಳಿದೆ.
Discussion about this post