ಪುತ್ತೂರು : ನೀರು ಸೇದಲೆಂದು ಹೋದ ಪತ್ನಿ 60 ಅಡಿಗೆ ಬಾವಿಗೆ ಬಿದ್ದ ಬೆನ್ನಲ್ಲೇ ಅವರನ್ನು ರಕ್ಷಿಸಲು ಹೋದ ಪತಿಯೂ ಬಾವಿಯಲ್ಲೇ ಬಾಕಿಯಾದ ಘಟನೆ ಸೋಮವಾರ ಮುಂಜಾನೆ ಪುತ್ತೂರು ತಾಲೂಕಿನ ಕೆಯ್ಯೂರಿನ ಮಾಡಾವು ಎಂಬಲ್ಲಿ ನಡೆದಿದೆ.
ಇಲ್ಲಿನ ಸುನಂದ ಅನ್ನುವವರು ನೀರು ಸೇದಲೆಂದು ಬಾವಿಯ ಸಮೀಪ ತೆರಳಿದ್ದರು. ಈ ವೇಳೆ ಕಾಲು ಜಾರಿದ ಅವರು ಬಾವಿಗೆ ಬಿದ್ದಿದ್ದರು. ಅದೃಷ್ಟ ಅನ್ನುವಂತೆ ಅವರಿಗೆ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಈ ವೇಳೆ ಸುನಂದ ಬಾವಿಗೆ ಬೀಳುತ್ತಿದ್ದಂತೆ ಪತಿ ಸದಾಶಿವ ರೈ ರಕ್ಷಣೆ ಸಲುವಾಗಿ ಬಾವಿಗಿಳಿದಿದ್ದಾರೆ.
ಪತ್ನಿಯನ್ನು ನೀರಿನಿಂದ ಮೇಲಕ್ಕೆ ಎತ್ತಿದರೂ ಬಾವಿಯಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಬಾವಿಯ ಕಲ್ಲು ಹಿಡಿದುಕೊಂಡು ನಿಂತಿದ್ದರು. ಅದು ಹೇಗೋ ಇವರಿಬ್ಬರು ಬಾವಿಗೆ ಬಿದ್ದಿರುವುದು ಸ್ಥಳೀಯರಿಗೆ ಗೊತ್ತಾಗಿದೆ. ತಕ್ಷಣ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಗಿದೆ. ಈ ವೇಳೆ ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಠಾಣಾಧಿಕಾರಿ ರುಕ್ಮಯ್ಯ ಗೌಡ, ಸಿಬ್ಬಂದಿಗಳಾದ ಮಂಜುನಾಥ ಹಾಗೂ ಮೋಹನ್ ಜಾದವ್ ಹಾಗೂ ಗೃಹರಕ್ಷಕ ದಳದ ಚಂದ್ರಕುಮಾರ್ ಇಬ್ಬರನ್ನೂ ಬಾವಿಯಿಂದ ರಕ್ಷಿಸಿದ್ದಾರೆ.
Discussion about this post