ಮಂಗಳೂರು : ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯ ಸೇವಾಂಜಲಿ ಟ್ರಸ್ಟ್ ಸಹಕಾರದೊಂದಿಗೆ ಚಿಂತನ ಗಂಗಾ ಅನ್ನುವ ಸಂಘಟನೆ ಸಾಹಿತಿ ಚಿಂತಕ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದೆ.
ಮಂಗಳೂರು ಡೊಂಗರಕೇರಿಯ ಕೆನರಾ ಹೈಸ್ಕೂಲ್ ನ ಭುವನೇಂದ್ರ ಹಾಲ್ ನಲ್ಲಿ ಸಂಜೆ 5 ಗಂಟೆಗೆ ಇಂದು ಈ ಕಾರ್ಯಕ್ರಮ ನಡೆಯಲಿದ್ದು, ಭರತ ಖಂಡದ ಗತ ವೈಭವ ಮತ್ತು ಅಳಿಸಿ ಹೋದ ಇತಿಹಾಸ ಅನ್ನುವ ವಿಚಾರ ಕುರಿತಂತೆ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ವಹಿಸಲಿದ್ದಾರೆ.
ಈ ಕಾರ್ಯಕ್ರಮ ಇದೀಗ ಎಡಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ದೇಶಪ್ರೇಮಿ ಸಂಘಟನೆ ಒಕ್ಕೂಟ ನಿರ್ಧರಿಸಿದೆ. ಈ ಸಂಬಂಧ DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಸಭೆಯೊಂದು ಶುಕ್ರವಾರ ನಡೆದಿದ್ದು, ಸಿಪಿಎಂ ಮುಖಂಡ ಯಾದವ ಶೆಟ್ಟಿ, ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್, ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಜೂನ್ 25 ರ ಸಂಜೆ 4.30ಕ್ಕೆ ಸಿಟಿ ಸೆಂಟರ್ ನಿಂದ ಮೆರವಣಿಗೆ ಹೊರಟು, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕಲು ಸಭೆಯಲ್ಲಿ ನಿರ್ಧರಿಸಲಾಯ್ತು.
ನಾರಾಯಣ ಗುರು, ಕಯ್ಯಾರ ಸೇರಿದಂತೆ ಅನೇಕರನ್ನು ಗೌಣಗೊಳಿಸುವಲ್ಲಿ ರೋಹಿತ್ ಚಕ್ರತೀರ್ಥ ಪಾತ್ರವಹಿಸಿದ್ದಾರೆ. ಜೊತೆಗೆ ನಾಡಗೀತೆ ಸೇರಿದಂತೆ ಅನೇಕ ಸಾಹಿತಿಗಳಿಗೆ ಚಕ್ರತೀರ್ಥ ಅವಮಾನ ಮಾಡಿದ್ದಾರೆ ಅನ್ನುವುದು ಎಡಪಂಥೀಯರ ಆರೋಪ.. ಇನ್ನು ನಾರಾಯಣ ಗುರು, ಕುವೆಂಪು, ಅಂಬೇಡ್ಕರ್ ವಿರೋಧಿಯಾಗಿರುವ ಚಕ್ರತೀರ್ಥ ಸನ್ಮಾನದಲ್ಲಿ ಮಂಗಳೂರು ವಿವಿ ಕುಲಪತಿ ಪಾಲ್ಗೊಳ್ಳಬಾರದು ಅನ್ನುವುದು ಈ ಸಂಘಟನೆಯ ಆಗ್ರಹ.
ಈ ನಡುವೆ ಸನ್ಮಾನ ಕುರಿತಂತೆ ಪ್ರತಿಕ್ರಿಯಿಸಿರುವ ಸಂಘಟಕರು, ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವುದು ಅವರ ವೈಯುಕ್ತಿಕ ವಿಚಾರ. ನಾವಂತು ಕಾರ್ಯಕ್ರಮ ಮಾಡುತ್ತೇವೆ ಅಂದಿದ್ದಾರೆ. ಇನ್ನು ಮಂಗಳೂರು ವಿವಿ ಕುಲಪತಿಗಳು, ರೋಹಿತ್ ಚಕ್ರತೀರ್ಥ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿಲ್ಲ ತಾನೇ, ಸಂಘಟನೆಯೊಂದು ನನ್ನನ್ನು ಕಾರ್ಯಕ್ರಮ ಆಹ್ವಾನಿಸಿದೆ. ನಾನು ರೋಹಿತ್ ಚಕ್ರತೀರ್ಥ ಪರ ಅಥವಾ ವಿರೋಧ ಮಾತನಾಡಲು ಹೋಗುತ್ತಿಲ್ಲ ಅಂದಿದ್ದಾರೆ.
Discussion about this post