ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಿಸುತ್ತೇವೆ. ಅದು ರಾಷ್ಟ್ರಧ್ವಜದ ಕೆಳಗೆ, ಇದನ್ನು ತಡೆಯಲು ಅದ್ಯಾವ ರಾಜಕೀಯ ಪಕ್ಷಕ್ಕೂ ಸಾಧ್ಯವಿಲ್ಲ
ಮಂಗಳೂರು : ಸಚಿವ ಈಶ್ವರಪ್ಪ ದೆಹಲಿಯ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸ್ತೀವಿ ಎಂದು ನೀಡಿದ್ದ ಹೇಳಿಕೆ ಸದನ ಕಲಾಪವನ್ನೇ ನುಂಗಿ ಹಾಕಿತ್ತು. ಈಶ್ವರಪ್ಪ ಹೇಳಿಕೆಯನ್ನೇ ನೆಪವಾಗಿಟ್ಟುಕೊಂಡ ಕಾಂಗ್ರೆಸ್, ಜನರ ಹಿತವನ್ನು ಕಡೆಗಣಿಸಿ ಕಲಾಪಕ್ಕೆ ಅಡ್ಡಿಪಡಿಸಿತ್ತು. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ಕಾಂಗ್ರೆಸ್ ನಾಯಕರು, ತಮ್ಮ ಪ್ರತಿಷ್ಟೆಗಾಗಿ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದು, ಸಂಬಳ, ಭತ್ಯೆ ಏರಿಸಿಕೊಂಡಿದ್ದರು.

ಇದರ ಬೆನ್ನಲ್ಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಈಶ್ವರಪ್ಪ ಹೇಳಿಕೆಗೆ ಪೂರಕವಾಗಿ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಿಸುತ್ತೇವೆ. ಅದು ರಾಷ್ಟ್ರಧ್ವಜದ ಕೆಳಗೆ ಎಂದು ಹೇಳಿದ್ದರು. ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಅವರು ಇದನ್ನು ತಡೆಯಲು ಅದ್ಯಾವ ರಾಜಕೀಯ ಪಕ್ಷಕ್ಕೂ ಸಾಧ್ಯವಿಲ್ಲ. ಇದು ಹಿಂದೂ ಸಮಾಜದ ಸಂಕಲ್ಪ ಎಂದು ಘೋಷಿಸಿದ್ದರು.

ಹರೀಶ್ ಪೂಂಜಾ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ದು, ಬೆಳ್ತಂಗಡಿ ಯುವ ಕಾಂಗ್ರೆಸ್ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೂಂಜಾ ವಿರುದ್ಧ ದೂರು ದಾಖಲಿಸಿದೆ. ಶಾಸಕರ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ರಾಷ್ಟ್ರಧ್ವಜಕ್ಕೆ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಹೀಗಾಗಿ ತಕ್ಷಣ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

Discussion about this post