ಹಳಸಿದ ಊಟ ಕೊಟ್ಟಿದ್ದಾರೆ ಅನ್ನುವುದು ಅವರ ವಾದ, ಊಟ ಚೆನ್ನಾಗಿದೆ ಎಲ್ಲರೂ ಇದನ್ನೇ ತಿಂದಿದ್ದಾರೆ ಅನ್ನುವುದು ಇವರ ವಾದ – Police fight
ಮಂಗಳೂರು : ನಗರ ಕಮಿಷನರೇಟ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಬಿಗುವಿನಿಂದ ಕೂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಭದ್ರತೆ ಸಲುವಾಗಿ ಉಡುಪಿ, ಉತ್ತರ ಕನ್ನಡ ಸೇರಿದಂತೆ ಬೇರೆ ಜಿಲ್ಲೆಗಳಿಂದಲೂ ಪೊಲೀಸ್ ಪಡೆಗಳನ್ನು ( Police fight) ಕರೆಸಿಕೊಳ್ಳಲಾಗಿದೆ.
ಈ ನಡುವೆ ಬಂದೋಬಸ್ತ್ ಗಾಗಿ ಆಗಮಿಸಿದ್ದ ಚಿಕ್ಕಮಗಳೂರು ಪೊಲೀಸರು ಹಾಗೂ ಸುರತ್ಕಲ್ ಪೊಲೀಸರ ನಡುವೆ ಊಟದ ವಿಚಾರಕ್ಕೆ ನಡೆದ ವಾಗ್ವಾದ (Police fight) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುರತ್ಕಲ್ ಬಂಟರ ಭವನದಲ್ಲಿ ಚಿಕ್ಕಮಗಳೂರಿನಿಂದ ಬಂದ ಪೊಲೀಸರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : Raichur news : ನಾಪತ್ತೆಯಾದ ನಾಲ್ವರು ವಿದ್ಯಾರ್ಥಿನಿಯರು ಪತ್ತೆ
ಬಂಟರ ಭವನದಲ್ಲಿ ವಾಸ್ತವ್ಯ ಹೂಡಿರುವ ಪೊಲೀಸ್ ಸಿಬ್ಬಂದಿಗೆ ಸುರತ್ಕಲ್ ಠಾಣೆಯ ಸಿಬ್ಬಂದಿ ಊಟ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಈ ಊಟ ಹಳಸಿದೆ, ನಮಗೆ ಈ ಊಟ ಬೇಡ ತೆಗೆದುಕೊಂಡು ಹೋಗಿ ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಎರಡು ಪೊಲೀಸ್ ತಂಡಗಳ ನಡುವೆ ವಾಗ್ವಾದ ನಡೆದಿದೆ. ಈ ಗಲಾಟೆಯ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸ್ ಸಿಬ್ಬಂದಿಯ ಕಿತ್ತಾಟದ ವಿಷಯ ಕೆಲವೇ ಗಂಟೆಗಳಲ್ಲಿ ಹಿರಿಯ ಅಧಿಕಾರಿಗಳ ಕಿವಿಗೂ ಬಿದ್ದಿದೆ. ಹೀಗಾಗಿ ತಕ್ಷಣ ಬದಲಿ ಊಟದ ವ್ಯವಸ್ಥೆಯನ್ನು ಮಾಡಿ ಪೊಲೀಸ್ ಸಿಬ್ಬಂದಿಯ ಹಸಿವಿನ ಜೊತೆಗೆ ಕೋಪವನ್ನು ತಣಿಸುವ ಕೆಲಸವನ್ನೂ ಮಾಡಲಾಯ್ತು.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸುರತ್ಕಲ್ ಇನ್ಸ್ ಪೆಕ್ಟರ್ ಚಂದ್ರಪ್ಪ, ಊಟ ಚೆನ್ನಾಗಿತ್ತು, ಎಲ್ಲರಿಗೂ ಒಂದೇ ಕಡೆಯಿಂದ ಊಟ ತರಲಾಗಿದೆ. ಅಧಿಕಾರಿಗಳು,KSRP ಸಿಬ್ಬಂದಿ ಅದನ್ನೇ ಊಟ ಮಾಡಿದ್ದಾರೆ. ಚಿಕ್ಕಮಗಳೂರು ಪೊಲೀಸರ ಆರೋಪದ ಕುರಿತಂತೆ ಪರಿಶೀಲನೆ ನಡೆಸುತ್ತೇನೆ ಅಂದಿದ್ದಾರೆ.
ಮಾಹಿತಿಗಳ ಪ್ರಕಾರ ಊಟ ಚೆನ್ನಾಗಿಲ್ಲ ಹಳಸಿಲ್ಲ ಅಂದಾಗ, ನಾವು ದತ್ತಪೀಠಕ್ಕೆ ಬಂದಾಗ ಒಳ್ಳೆ ಊಟ ಕೊಡ್ತೀರಾ ಎಂದು ಯಾರೋ ಪ್ರಶ್ನೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದಿದೆ ಅನ್ನಲಾಗಿದೆ.
ಒಟ್ಟಿನಲ್ಲಿ ಹೊರ ಜಿಲ್ಲೆಗಳಿಂದ ಭದ್ರತೆ ಸಲುವಾಗಿ ಸಿಬ್ಬಂದಿಗಳು ಬಂದಾಗ ಸಹಜವಾಗಿಯೇ ಮಾನಸಿಕ ಒತ್ತಡ ಹೆಚ್ಚಿರುತ್ತದೆ. ಜೊತೆಗೆ ಒಂದಿಷ್ಟು ಸಮಸ್ಯೆಗಳು ಕೂಡಾ ಉದ್ಭವಿಸುವುದು ಸಹಜ. ಒಂದೊಳ್ಳೆಯ ವಸತಿ, ನಿತ್ಯ ಕರ್ಮಗಳಿಗೆ ಸೂಕ್ತ ವ್ಯವಸ್ಥೆ, ಹಸಿವು ತಣಿಸಲು ಒಳ್ಳೆಯ ಆಹಾರ ಕೊಟ್ಟರೆ ಅವೆಲ್ಲವೂ ಸರಿಯಾಗುತ್ತದೆ.
Discussion about this post