ಬಹಿರಂಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ರಾಮದಾಸ್ ಅವರನ್ನು ಕರೆದು ಬೆನ್ನಿಗೆ ಗುದ್ದು ಕೊಟ್ಟು ಮಾತನಾಡಿಸಿದ್ದು ಹಲವು ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಗಿದೆ
ಬೆಂಗಳೂರು : ವಿಶ್ವ ಯೋಗ ದಿನಾಚರಣೆಯಂದು ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಎಸ್.ಎಂ ರಾಮದಾಸ್ ಅವರನ್ನು ಕರೆದು ಅತ್ಯಂತ ಆಪ್ತವಾಗಿ ಮಾತನಾಡಿಸಿದ್ದರು. ಒಡ ಹುಟ್ಟಿದ ಸಹೋದರ ಅನ್ನುವಂತೆ ಬೆನ್ನಿಗೆ ಗುದ್ದಿ ಕುಶಲೋಪರಿ ವಿಚಾರಿಸಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಕೂಡಾ ಆಗಿತ್ತು.
ಹಾಗೇ ನೋಡಿದರೆ ರಾಮ್ ದಾಸ್ ಹಾಗೂ ನರೇಂದ್ರ ಮೋದಿಯವರ ನಂಟು ಅನೇಕ ಹಿರಿಯ ಬಿಜೆಪಿ ನಾಯಕರಿಗೆ ಗೊತ್ತಿದೆ. ಆದರೆ ಇತ್ತೀಚೆಗೆ ಸಂಸದರಾದವರಿಗೆ, ಬಿಜೆಪಿಗೆ ವರ್ಷಗಳ ಹಿಂದೆ ಬಂದವರಿಗೆ ಇವರಿಬ್ಬರ ಸಂಬಂಧ ಎಂತಹುದು ಅನ್ನುವುದು ಗೊತ್ತಿಲ್ಲ.
ರಾಮದಾಸ್ ಆರ್ ಎಸ್ ಎಸ್ ಹಿನ್ನಲೆಯಿಂದ ಬಂದ ವ್ಯಕ್ತಿ. ಜೊತೆಗೆ ಕೆಲವೊಂದು ಆದರ್ಶಗಳನ್ನೂ ಕೂಡಾ ಮೈಗೂಡಿಸಿಕೊಂಡವರು. ಅವರ ಬದುಕಿನ ಪ್ರೇಮ ಪ್ರಕರಣವೊಂದು ರಾಡಿ ರಂಪಾಟವಾಗದೇ ಇರುತ್ತಿದ್ರೆ ರಾಮ್ ದಾಸ್ ಎಲ್ಲೋ ಇರಬೇಕಾಗಿತ್ತು. ಆದರೆ ಹಾಗಾಗಿಲ್ಲ.

ರಾಮ್ ದಾಸ್ ರಾಜಕೀಯದಲ್ಲಿ ಸಕ್ರಿಯವಾಗಿದ್ದರೂ ಸಂಘ ಮತ್ತು ಹಿಂದುತ್ವ ಅವರ ಮೊದಲ ಆದ್ಯತೆ. ರಾಮ್ ದಾಸ್ ಒಬ್ಬ ಪಕ್ಕಾ ಸಂಘದ ಕಾರ್ಯಕರ್ತ. ಇದೇ ಕಾರಣಕ್ಕಾಗಿ ನರೇಂದ್ರ ಮೋದಿ ಹಾಗೂ ರಾಮ್ ದಾಸ್ ನಡುವೆ ಹಲವು ದಶಕಗಳ ಹಿಂದೆ ಆತ್ಮೀಯತೆ ಬೆಳೆದಿತ್ತು ಅನ್ನಲಾಗಿದೆ. ರಾಮ್ ದಾಸ್ ಅವರ ಸರಳತೆಯೇ ಮೋದಿಯವರನ್ನು ಮೋಡಿ ಮಾಡಿತ್ತು.
ಇನ್ನು ಹಲವಾರು ವರ್ಷಗಳ ಹಿಂದೆ ಮೈಸೂರಿಗೆ ಬಂದಿದ್ದ ಮೋದಿಯವರು ರಾಮ್ ದಾಸ್ ಮನೆಯಲ್ಲೇ ಎರಡು ದಿನ ವಾಸ್ತವ್ಯ ಹೂಡಿದ್ದರು. ರಾಮ್ ದಾಸ್ ಕಾರಿನಲ್ಲೇ ಮೈಸೂರು ಸುತ್ತಾಡಿದ್ದರು. ರಾಮ್ ದಾಸ್ ತಾಯಿಯೇ ಮಾಡಿದ ಆಡುಗೆಯನ್ನು ನರೇಂದ್ರ ಮೋದಿಯವರು ಸವಿದಿದ್ದರು.
ಮಾತ್ರವಲ್ಲದೆ ಗುಜರಾತ್ ಗೆ ರಾಮ್ ದಾಸ್ ಹಾಗೂ ಅವರ ತಾಯಿಯನ್ನು ಕರೆಸಿಕೊಂಡಿದ್ದ ನರೇಂದ್ರ ಮೋದಿಯವರು, ಇವರಿಬ್ಬರ ಜೊತೆಗೆ ದೀಪಾವಳಿ ಆಚರಿಸಿದ್ದರಂತೆ. ಇಡೀ ಗುಜರಾತ್ ದರ್ಶನವನ್ನು ಕೂಡಾ ಮಾಡಿಸಿದ್ದರಂತೆ. ಹೀಗಾಗಿ ರಾಮ್ ದಾಸ್ ಕುಟುಂಬ ಮತ್ತು ಮೋದಿಯವರ ಕುಟುಂಬದ ನಡುವೆ ರಾಜಕೀಯವನ್ನು ಹೊರತಪಡಿಸಿದ ಸಂಬಂಧವಿದೆ ಎನ್ನಲಾಗಿದೆ.
ಇನ್ನು ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕವೂ ಇವರಿಬ್ಬರ ಸಂಬಂಧ ಮುಂದುವರಿದಿದ್ದು, ರಾಮ್ ದಾಸ್ ಎಂದಿಗೂ ಮೋದಿಯ ಹೆಸರಿನಲ್ಲಿ ರಾಜಕೀಯ ಮಾಡಲಿಲ್ಲ. ರಾಜ್ಯ ಬಿಜೆಪಿ ನಾಯಕರು ತುಳಿದಾಗಲೂ ಮೋದಿಗೆ ದೂರು ಹೇಳಲಿಲ್ಲ. ಸಚಿವ ಸ್ಥಾನ ಕೊಡಿಸಿ ಎಂದು ಮೋದಿಗೆ ಮನವಿಯನ್ನೂ ಮಾಡಲಿಲ್ಲ. ಅಷ್ಟೇ ಯಾಕೆ ಮೋದಿಯವರು ಕೂಡಾ ರಾಮ್ ದಾಸ್ ತನ್ನ ಆತ್ಮೀಯ ಅನ್ನುವ ಕಾರಣಕ್ಕೆ ಸಚಿವ ಸ್ಥಾನಕ್ಕೆ ಶಿಫಾರಸ್ಸು ಕೂಡಾ ಮಾಡಲಿಲ್ಲ. ಆ ಮಟ್ಟಿಗೆ ಅವರಿಬ್ಬರ ಸ್ನೇಹ ಗಟ್ಟಿಯಾಗಿದೆ ಅನ್ನುವುದು ಆಪ್ತ ವಲಯದ ಮಾತು.
ಇನ್ನು ಮೋದಿಯವರು ರಾಮ್ ದಾಸ್ ಬೆನ್ನಿಗೆ ಗುದ್ದು ಹಾಕುತ್ತಿದ್ರೆ ಪಕ್ಕದಲ್ಲೇ ನಿಂತಿದ್ದ ಸಂಸದ ಪ್ರತಾಪ್ ಸಿಂಹ ಮುಖವನ್ನು ನೋಡಬೇಕಾಗಿತ್ತು.
Discussion about this post