ಬೆಂಗಳೂರು : ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಿರುವ ಒಮಿಕ್ರೋನ್ ಆತಂಕಕ್ಕೆ ಕಾರಣವಾಗಿದೆ. ಅತ್ಯಂತ ವೇಗವಾಗಿ ಹರಡುವ ಒಮಿಕ್ರೋನ್ ರೂಪಾಂತರಿ ವೈರಸ್ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಹೇರುವ ಲಕ್ಷಣಗಳಿದೆ.
ಎರಡನೇ ಅಲೆಯ ಸಂದರ್ಭದಲ್ಲಿ ಕಾಣಿಸಿಕೊಂಡ ಡೆಲ್ಟಾ ವೈರಸ್ ದೊಡ್ಡ ಮಟ್ಟದ ಹಾನಿ ಮಾಡಿತ್ತು. ಹೀಗಾಗಿ ಮೂರನೇ ಅಲೆಗೆ ಕಾರಣವಾಗಿರುವ ಒಮಿಕ್ರೋನ್ ಬಗ್ಗೆ ಸಹಜವಾಗಿಯೇ ಆತಂಕವಿದೆ. ಎರಡನೇ ಅಲೆ ಸಂದರ್ಭದಲ್ಲಿ ಪ್ರಾಣವಾಯುವಿಗಾಗಿ ಪರದಾಡಿದ ಘಳಿಗೆ ಕಣ್ಣ ಮುಂದಿದೆ. ಹೀಗಾಗಿ ಈ ಬಾರಿ ಏನು ಕಾದಿದೆಯೋ ಅನ್ನುವುದೇ ಎಲ್ಲರ ಪ್ರಶ್ವೆ.
ಈ ಆತಂಕದ ನಡುವೆ ಇದೀಗ ಬೆಂಗಳೂರಿನ ವೈದ್ಯ ಡಾ. ವಿಶಾಲ್ ರಾವ್ ಶುಭ ಸುದ್ದಿಯೊಂದನ್ನು ಕೊಟ್ಟಿದ್ದು, ಡೆಲ್ಟಾಗೆ ಹೋಲಿಸಿದರೆ ಒಮಿಕ್ರೋನ್ ರೂಪಾಂತರಿ ವೈರಸ್ ಶ್ವಾಸಕೋಶಕ್ಕೆ ಹೆಚ್ಚು ಹಾನಿ ಮಾಡೋದಿಲ್ಲ ಅಂದಿದ್ದಾರೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆ ಇರಲಿದೆ ಅನ್ನುವುದು ವಿಶಾಲ್ ರಾವ್ ಅವರ ಮಾತು.
ಒಮಿಕ್ರೋನ್ ರೂಪಾಂತರಿ ವೈರಸ್ ಮಾನವ ದೇಹದ ಮೇಲೆ ಬೀರುವ ಪರಿಣಾಮ ಕುರಿತಂತೆ ಹಾಂಕಾಂಗ್ ವಿವಿ ಅಧ್ಯಯನ ನಡೆಸಿದ್ದು, ಈ ಅಧ್ಯಯನ ಪ್ರಕಾರ , ಡೆಲ್ಟಾಗೆ ಹೋಲಿಸಿದರೆ ಒಮಿಕ್ರೋನ್ ಸಾಧು ವೈರಸ್ ಅನ್ನುವುದು ಗೊತ್ತಾಗಿದೆ.
ಒಮಿಕ್ರೋನ್ ಹರಡುವ ಪ್ರಮಾಣ ಶೇ70ರಷ್ಟಿದ್ದರೂ, ಶ್ವಾಸಕೋಶಕ್ಕೆ ಹಾನಿ ಮಾಡುವ ಪ್ರಮಾಣ ತೀರಾ ಕಡಿಮೆಯಿದ್ದು , ಶೇ5ರಷ್ಟು ಮಂದಿಗೆ ಮಾತ್ರ ಆಕ್ಸಿಜನ್ ಬೇಕಾಗಬಹುದು. ಆದರೆ ಡೆಲ್ಟಾದಲ್ಲಿ ಶೇ 17ರಷ್ಟು ಮಂದಿ ಪ್ರಾಣವಾಯುವಿನ ಅಗತ್ಯತೆ ಕಂಡು ಬಂದಿತ್ತು ಎಂದು ಡಾ. ವಿಶಾಲ್ ರಾವ್ ಹೇಳಿದ್ದಾರೆ.
ಈಗ ನಡೆದಿರುವ ಸಂಶೋಧನೆಗಳಲ್ಲಿ ಒಮಿಕ್ರೋನ್ ರೂಪಾಂತರಿ ವೈರಸ್ ನೆಗಡಿ, ಕೆಮ್ಮು ಉಂಟು ಮಾಡಿದೆ. ಒಮಿಕ್ರೋನ್ ಗಂಟಲಿನಿಂದ ಕೆಳಗೆ ಇಳಿದು ಶ್ವಾಸಕೋಶಕ್ಕೆ ಹಾನಿ ಮಾಡುವಷ್ಟು ತಾಕತ್ತು ಹೊಂದಿಲ್ಲ. ಹೀಗಾಗಿ ಸರಿಯಾಗಿ ಮಾಸ್ಕ್ ಬಳಸಿದರೆ ಮೂರನೇ ಅಲೆಯನ್ನು ಧೈರ್ಯವಾಗಿ ಎದುರಿಸಬಹುದಾಗಿದೆ.
ಇನ್ನು ಹಾಂಕಾಂಗ್ ವಿವಿಯ ಸಂಶೋಧನೆಗೆ ಪೂರಕವಾಗಿ ನೋಡುವುದಾದರೆ ರಾಜ್ಯದಲ್ಲಿ ಈ ತನಕ ಒಮಿಕ್ರೋನ್ ದೃಢಪಟ್ಟವರ ಪೈಕಿ ಯಾರೊಬ್ಬರೂ ಗಂಭೀರವಾಗಿಲ್ಲ. ಮಾತ್ರವಲ್ಲದೆ ಬಹುತೇಕ ಮಂದಿಯಲ್ಲಿ ರೋಗ ಲಕ್ಷಣಗಳೇ ಇಲ್ಲ ಎಂದು ವಂಶವಾಹಿ ಪರೀಕ್ಷೆಗಳ ಸರ್ವೇಕ್ಷಣಾ ಸಮಿತಿ ಸದಸ್ಯರಾಗಿರುವ ಡಾ. ವಿಶಾಲ್ ರಾವ್ ಹೇಳಿದ್ದಾರೆ.
Discussion about this post