ಬೆಂಗಳೂರು : ಬುಧವಾರ ಒಮಿಕ್ರೋನ್ ಸೋಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಕರ್ನಾಟಕ ಒಮಿಕ್ರೋನ್ ಮುಕ್ತವಾಗಿತ್ತು. ಆದರೆ ಆ ಖುಷಿ ತುಂಬಾ ಹೊತ್ತು ಇರಲಿಲ್ಲ. ಗುರುವಾರ ಸಂಜೆ 5 ಜನರಲ್ಲಿ ಒಮಿಕ್ರೋನ್ ಪತ್ತೆಯಾಗುವ ಮೂಲಕ ಕರ್ನಾಟಕದಲ್ಲಿ ಒಮಿಕ್ರೋನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ. ಮತ್ತೊಂದು ಕಡೆ ಒಮಿಕ್ರೋನ್ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕಿತರ ಪೈಕಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ವಾರ ಇಂಗ್ಲೆಂಡ್ ನಿಂದ ಬೆಂಗಳೂರಿಗೆ ಬಂದಿದ್ದ 19 ವರ್ಷದ ಯುವತಿ, ನೈಜೀರಿಯಾದಿಂದ ಬೆಳಗಾವಿಗೆ ಬಂದ 52 ವರ್ಷದ ಪುರುಷ, ದೆಹಲಿಯಿಂದ ಬೆಂಗಳೂರಿಗೆ ಬಂದ 70 ವರ್ಷ ವೃದ್ಧೆ ಹಾಗೂ 33 ಮತ್ತು 36 ವರ್ಷದ ಯುವಕರಲ್ಲಿ ಸೋಂಕು ದೃಢಪಟ್ಟಿದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ. ಗಮನಾರ್ಹ ಅಂಶ ಅಂದ್ರೆ ಈ 5 ಮಂದಿಯೂ ಕೊರೋನಾ ಲಸಿಕೆಯ 2 ಡೋಸ್ ಗಳನ್ನು ಪಡೆದಿದ್ದಾರೆ.
ದೇಶದಲ್ಲಿ ಗುರುವಾರ ಒಟ್ಟು 14 ಒಮಿಕ್ರೋನ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 83ಕ್ಕೆ ಏರಿದೆ.
ಈ ನಡುವೆ ಬ್ರಿಟನ್ ನಲ್ಲಿ ಡೆಲ್ಲಾ ಮತ್ತು ಒಮಿಕ್ರೋನ್ ರೂಪಾಂತರಿ ವೈರಸ್ ಏಕಕಾಲದಲ್ಲಿ ಸ್ಫೋಟಗೊಂಡಂತೆ ಕಾಣಿಸುತ್ತಿದೆ. ಈಗಾಗಲೇ ಈ ಎರಡೂ ವೈರಸ್ ನಿಂದ ನಲುಗಿರುವ ಬ್ರಿಟನ್ ದೇಶದಲ್ಲಿ ಗುರುವಾರ ಒಂದೇ ದಿನ 88376 ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಸಾವಿನ ಸಂಖ್ಯೆ 146ಕ್ಕೆ ಏರಿದೆ. ಇನ್ನು ಅಮೆರಿಕಾದಲ್ಲೂ ಒಮಿಕ್ರೋನ್ ಹಾವಳಿ ತೀವ್ರವಾಗಿದ್ದು 2 ದಿನಕ್ಕೊಮ್ಮೆ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ. ಅಮೆರಿಕಾದ 51 ರಾಜ್ಯಗಳ ಪೈಕಿ 35 ರಾಜ್ಯಗಳು ರೂಪಾಂತರಿ ಸೋಂಕಿನಿಂದ ತತ್ತರಿಸಿದೆ.
Discussion about this post