ಬೆಂಗಳೂರು : ಕೊರೋನಾ ಅಬ್ಬರ ಕಡಿಮೆಯಾಯ್ತು, ಭಾರತಕ್ಕಿಲ್ಲ ಕೊರೋನಾ ಮೂರನೇ ಅಲೆ ಭೀತಿ ಅನ್ನುವ ಹೆಡ್ ಲೈನ್ ನಡುವೆ ನೆಮ್ಮದಿಯ ನಿಟ್ಟುಸಿರು ಬಿಟ್ರೆ, ಒಮಿಕ್ರೋನ್ ರೂಪಾಂತರಿ ವೈರಸ್ ಆತಂಕ ಹೆಚ್ಚಿಸಿದೆ. ಈ ಬಗ್ಗೆ ತಜ್ಞರಲ್ಲೂ ಸ್ಪಷ್ಟತೆಗಳಿಲ್ಲದಿರುವುದು ಮತ್ತು ಮತ್ತಷ್ಟು ಸಂಶೋಧನೆಯ ಅಗತ್ಯವಿರುವ ಕಾರಣ ಈ ಹೊಸ ಶತ್ರುವಿನ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ.
ಈ ನಡುವೆ ನವೆಂಬರ್ 2 ರಂದು ನವೆಂಬರ್ 20ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ 94 ಮಂದಿ ಆಗಮಿಸಿದ್ದಾರೆ. ಈ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಒಬ್ಬರಲ್ಲಿ ಡೆಲ್ಟಾ ಮಾದರಿ ಖಚಿತಪಟ್ಟಿದ್ದು ಮತ್ತೊಬ್ಬರಲ್ಲಿ ಡೆಲ್ಟಾಗಿಂದ ಭಿನ್ನವಾದ ವಂಶವಾಹಿಗಳು ಗುಣಗಳು ಪತ್ತೆಯಾಗಿವೆ. ಜಿನೋಮಿಕ್ ಸೀಕ್ವೆನ್ಸ್ ವರದಿಯಲ್ಲಿ ಇದು ಉಲ್ಲೇಖಿತವಾಗಿದ್ದು, ಹೀಗಾಗಿ ಈ ಮಾದರಿಯನ್ನು ಮತ್ತಷ್ಟು ಅಧ್ಯಯನ ಸಲುವಾಗಿ ಕೇಂದ್ರ ಸರ್ಕಾರದ ಪ್ರಯೋಗಾಲಯಕ್ಕೆ ಕಳುಹಿಸಿದೆ. ಈ ಮೂಲಕ ಅದು ರೂಪಾಂತರಿ ವೈರಾಣು ಅನ್ನುವುದನ್ನು ಪತ್ತೆ ಹಚ್ಚಲು ನಿರ್ಧರಿಸಲಾಗಿದೆ. ಇದನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರೇ ಸ್ಪಷ್ಟಪಡಿಸಿದ್ದಾರೆ.
ಮತ್ತೊಂದು ಗುಡ್ ನ್ಯೂಸ್ ಅಂದ್ರೆ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಸೋಂಕಿತರ ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಿದ್ದು, 224 ಸಂಪರ್ಕಿತರಿಗೂ ಸೋಂಕು ದೃಢಪಟ್ಟಿಲ್ಲ.
ಒಮಿಕ್ರೋನ್ ಬಲು ಅಪಾಯಕಾರಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಬಂತು ಎಚ್ಚರಿಕೆ
ನವದೆಹಲಿ : ವಿಶ್ವಕ್ಕೆ ಮತ್ತೊಂದು ಕಂಟಕ ತಂದೊಡ್ಡಲಿದೆ ಎಂದು ಭಾವಿಸಲಾಗಿರುವ ಒಮಿಕ್ರೋನ್ ರೂಪಾಂತರಿ ತಳಿ ಕುರಿತಂತೆ ಕೆಲವೇ ಕೆಲವು ವೈದ್ಯರು ಉಡಾಫೆಯ ಹೇಳಿಕೆ ನೀಡುತ್ತಿದ್ದಾರೆ. ಇದೇನು ಗಂಭೀರವಲ್ಲ. ಈಗಾಗಲೇ ಕೊರೋನಾ ಸೋಂಕು ತಗುಲಿದವರಿಗೆ ಮತ್ತೆ ತಗುಲುವುದಿಲ್ಲ ಅನ್ನುತ್ತಿದ್ದಾರೆ. ಇಂತಹ ಹೇಳಿಕೆಗಳಿಂದ ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಮತ್ತಷ್ಟು ಮರೆಯುವಂತಾಗಿದೆ. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಯೇ ಒಮಿಕ್ರೋನ್ ರೂಪಾಂತರಿ ವೈರಸ್ ಜಗತ್ತಿಗೆ ಅತ್ಯಂತ ಅಪಾಯಕಾರಿ ವೈರಸ್ ಅಂದಿದೆ.
ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ WHO, ಒಮಿಕ್ರೋನ್ ನ ಪ್ರೋಟಿನ್ ಗಳು ಭಾರೀ ಪ್ರಮಾಣದಲ್ಲಿ ರೂಪಾಂತರಗೊಂಡಿದೆ. ಹೀಗಾಗಿ ಜಗತ್ತಿನಲ್ಲಿ ಈ ವೈರಸ್ ಹರಡುವ ಸಾಧ್ಯತೆಗಳಿದೆ. ಜೊತೆಗೆ ಇದು ಅಪಾಯಕಾರಿಯಾಗಿಯೂ ಪರಿಣಮಿಸಬಹುದು. ರೂಪಾಂತರಿ ತಳಿ ಎಲ್ಲಿ ಹರಡುತ್ತದೆ ಅನ್ನುವ ಆಧಾರದಲ್ಲಿ ಅದರ ಗಂಭೀರತೆಯೂ ಬದಲಾಗಬಹುದು. ಹಾಗಿದ್ದರೂ ಹೊಸ ಸೋಂಕಿನಿಂದ ಎಲ್ಲೂ ಸಾವು ಸಂಭವಿಸಿಲ್ಲ ಎಂದು ಹೇಳಿದೆ.
ಆದರೆ ಲಸಿಕೆ ಪಡೆದವರು ಹಾಗೂ ಒಮ್ಮೆ ಸೋಂಕು ತಗುಲಿದವರಿಗೆ ಒಮಿಕ್ರೋನ್ ಅಪಾಯಕಾರಿಯೇ ಅನ್ನುವ ಕುರಿತಂತೆ ವಿಶ್ವಸಂಸ್ಥೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಮ್ಮೆ ಕೊರೋನಾ ಸೋಂಕು ತಗುಲಿದ ಬಳಿಕ ಉತ್ಪಾದನೆಯಾಗಿರುವ ರೋಗ ನಿರೋಧ ಶಕ್ತಿಯನ್ನು ಈ ಒಮಿಕ್ರೋನ್ ಭೇದಿಸಬಲ್ಲುದೇ ಅನ್ನುವ ಕುರಿತಂತೆ ಮತ್ತಷ್ಟು ಅಧ್ಯಯಮ ಅಗತ್ಯವಿದೆ ಎಂದು WHO ಹೇಳಿದೆ.
ಇನ್ನು ಆಫ್ರಿಕಾದ ಬೋಟ್ಸ್ ವಾನಾ ದೇಶದಲ್ಲಿ ಪತ್ತೆಯಾಗಿರುವ ಈ ಹೊಸ ರೂಪಾಂತರಿ ವೈರಸ್ 13 ದೇಶಗಳಿಗೆ ಹರಡಿದೆ.
Discussion about this post