ಗಾಜಿಪುರ: ಗಂಗಾನದಿಯಲ್ಲಿ ಪೆಟ್ಟಿಗೆಯಲ್ಲಿ ತೇಲುತ್ತಿದ್ದ ನವಜಾತ ಶಿಶುವೊಂದು ಪತ್ತೆಯಾಗಿದ್ದು, ನಾವಿಕ ಮಗುವನ್ನು ರಕ್ಷಿಸಿದ್ದಾರೆ.
ಬುಧವಾರ ಮರದ ಪೆಟ್ಟಿಗೆಯಲ್ಲಿ ತೇಲಿ ಬಂದ ಹೆಣ್ಣು ಶಿಶುವಿಗೆ 22 ದಿನಗಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮಗುವಿನ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಆಶಾ ಜ್ಯೋತಿ ಕೇಂದ್ರಕ್ಕೆ ಸೇರಿಸಲಾಗಿದೆ. ಈ ನಡುವೆ ಗಂಗೆಯಲ್ಲಿ ಸಿಕ್ಕ ಹೆಣ್ಣು ಮಗುವಿನ ಲಾಲನೆ ಪಾಲನೆಯನ್ನು ಉತ್ತರ ಪ್ರದೇಶ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
ಎಂದಿನಂತೆ ಜನರ ಸಂಚಾರವಿದ್ದ ಗಾಜಿಪುರದ ದಾದ್ರಿ ಘಾಟ್ನಲ್ಲಿ ದೋಣಿ ನಡೆಸುತ್ತಿದ್ದ ನಾವಿಕನಿಗೆ ನವಜಾತ ಶಿಶು ಅಳುತ್ತಿರುವ ಶಬ್ಧ ಕೇಳಿಸಿದೆ. ತಕ್ಷಣ ಅಳುವಿನ ದನಿ ಕೇಳಿಸಿದ ಜಾಗಕ್ಕೆ ದೋಣಿ ತಿರುಗಿಸಿದರೆ ನದಿಯಲ್ಲಿ ತೇಲಿ ಬರುತ್ತಿದ್ದ ಮರದ ಪೆಟ್ಟಿಗೆಯೊಂದು ಪತ್ತೆಯಾಗಿದೆ.
ತೆರೆದು ನೋಡಿದರೆ ಹೆಣ್ಣು ಮಗು ಹಾಗೂ ಪೆಟ್ಟಿಗೆಯಲ್ಲಿ ದುರ್ಗಾದೇವಿ ಮತ್ತು ವಿಷ್ಣುವಿನ ಫೋಟೋಗಳಿದ್ದವು. ಇದರೊಂದಿಗೆ ಮಗುವಿನ ಜಾತಕ ಕೂಡ ಇತ್ತು ಎನ್ನಲಾಗಿದೆ.
ಬಳಿಕ ಮಗುವನ್ನು ಗುಲ್ಲು ಎಂಬ ವ್ಯಕ್ತಿ ಮನೆಗೆ ಕರೆದೊಯ್ದು ಸ್ನಾನ ಮಾಡಿಸಿ ಹಾಲು ಕೊಟ್ಟಿದ್ದಾರೆ. ತಕ್ಷಣಕ್ಕೆ ಈ ಬಗ್ಗೆ ಪೊಲೀಸರಿಗೆ ದೂರು ಕೊಡಲು ಸಾಧ್ಯವಾಗಿರಲಿಲ್ಲ. ಮರು ದಿವ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತಕ್ಷಣ ಪೊಲೀಸರು ಮಗುವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಈ ನಡುವೆ ಮಗುವನ್ನು ತನಗೆ ನೀಡುವಂತೆ ಗುಲ್ಲು ಪೊಲೀಸರಿಗೆ ಮನವಿ ಮಾಡಿದ್ದಾರೆ. ಇದೀಗ ಅಧಿಕಾರಿಗಳು ಮನವಿಯನ್ನು ತಿರಸ್ಕರಿಸಿದ್ದು, ಕಾನೂನು ಪ್ರಕಾರ ಮಗುವನ್ನು ನಿಮಗೆ ನೀಡಲಾಗದು ಅಂದಿದ್ದಾರೆ.
ಇದೀಗ ಮಗುವಿನ ಆರೈಕೆಗ ಬಗ್ಗೆ ಘೋಷಣೆ ಮಾಡಿರುವ ಸಿಎಂ ಯೋಗಿ, ಮಗುವಿನ ರಕ್ಷಿಸಿದ ನಾವಿಕನಿಗೆ ವಸತಿ ಸೌಕರ್ಯ ಹಾಗೂ ಅರ್ಹ ಯೋಜನೆಗಳ ಸೌಲಭ್ಯಗಳಿಗೆ ಫಲಾನುಭವಿಯಾಗಿ ಪರಿಗಣಿಸುವಂತೆ ಸೂಚಿಸಿದ್ದಾರೆ.
Discussion about this post