ಉಡುಪಿ : ಕೊರೋನಾ ಆತಂಕದ ನಡುವೆ ಶಿಕ್ಷಣ ಇಲಾಖೆ ನಡೆಸಿದ SSLC ಪರೀಕ್ಷೆ ಎಲ್ಲಾ ಆತಂಕಗಳನ್ನು ದೂರ ಸರಿಸಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿರುವುದರ ಹಿಂದೆ ಶಿಕ್ಷಕರ ಶ್ರಮ ಸಾಕಷ್ಟಿದೆ. ಜೊತೆಗೆ ಶಿಕ್ಷಕರ ಬೇಕು ಬೇಡಗಳಿಗೆ ಸ್ಪಂದಿಸಿದ ಡಿಡಿಪಿಐಗಳಿಗೂ ಯಶಸ್ವಿನ ಗೌರವ ಸಲ್ಲಬೇಕಿದೆ. ಕೆಲವೊಂದು ಜಿಲ್ಲೆಗಳಲ್ಲಿ ಡಿಡಿಪಿಐಗಳು ನಿರ್ಲಕ್ಷ್ಯ ವಹಿಸಿದ್ದಾರೆ ಅನ್ನುವ ಅಪವಾದ ಬಿಟ್ಟರೆ ಬಹುತೇಕ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಬೇಕು ಅನ್ನುವ ವಿದ್ಯಾರ್ಥಿಗೆ ಪ್ರೋತ್ಸಾಹ ನೀಡಲಾಗಿದೆ. ಈ ಪೈಕಿ ವಿಶಿಷ್ಟ ಸಾಧನೆಗೈದವರು ಉಡುಪಿಯ ಡಿಡಿಪಿಐ ಎನ್. ಎಚ್.ನಾಗೂರ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರುವಿನ ಹಿತ್ಲು ಅನ್ನೋ ದ್ವೀಪದಲ್ಲಿ ಸಾಕಷ್ಟು ಜನಸಂಖ್ಯೆ ಇದ್ದರೂ ಮೂಲಭೂತ ಸೌಕರ್ಯಗಳು ಇಲ್ಲಿಲ್ಲ. ಅದರಲ್ಲೂ ಸೌಪರ್ಣಿಕಾ ನದಿಗೊಂದು ಸೇತುವೆ ಕಟ್ಟಿ ಪುಣ್ಯ ಕಟ್ಚಿಕೊಳ್ಳಿ ಅನ್ನುವ ಮನವಿಗೆ ಇನ್ನೂ ಬೆಲೆ ಸಿಕ್ಕಿಲ್ಲ. ಹೀಗಾಗಿ ದೋಣಿಯೇ ಇವರ ಸರ್ವಸ್ವ.
ಈ ನಡುವೆ ಇದೇ ದ್ವೀಪದಲ್ಲಿ ಇಬ್ಬರು ವಿದ್ಯಾರ್ಥಿಗಳು SSLC ಓದುತ್ತಿದ್ದಾರೆ. ಪ್ರತೀ ವರ್ಷವೂ ವಿದ್ಯಾರ್ಥಿಗಳು ದೋಣಿ ಏರಿ ಬಂದು ಪರೀಕ್ಷೆ ಬರೆದು ಹೋಗುತ್ತಿದ್ದರು. ಆದರೆ ಈ ಬಾರಿ ಕರಾವಳಿಯ ಸುರಿಯುತ್ತಿರುವ ಭಾರೀ ಮಳೆಯಿಂದ ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿತ್ತು. ಇರೋ ದೋಣಿಯಲ್ಲಿ ಹೋದರೆ ಮಗುಚಿ ಬೀಳುವ ಆತಂಕ. ಹೀಗಾಗಿ ಮಕ್ಕಳನ್ನು ಪರೀಕ್ಷೆ ಬರೆಯಲು ಕಳುಹಿಸಲು ಪೋಷಕರು ಸಿದ್ದವಿರಲಿಲ್ಲ.
ಯಾವಾಗ ಮರವಂತೆ ಸರ್ಕಾರಿ ಪ್ರೌಢಶಾಲೆಯ ಶಿಲ್ಪಾ ಹಾಗೂ ಸಂಜನಾ ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿರುವ ಕಾರಣ ಪರೀಕ್ಷಾ ಕೇಂದ್ರ ಬರೋದಿಲ್ಲ ಎಂದು ಗೊತ್ತಾಯ್ತೋ ಡಿಡಿಪಿಐ ಎನ್. ಎಚ್.ನಾಗೂರ ಫೀಲ್ಡಿಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು ಎಂದು ಪಣ ತೊಟ್ಟಿದ್ದ ಅವರು ಬೈಂದೂರು ತಹಶೀಲ್ದಾರ್ ಶೋಭಾ ಲಕ್ಷ್ಮೀ ಬಳಿ ಡಬಲ್ ದೋಣಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ತಹಶೀಲ್ದಾರ್ ದೋಣಿ ವ್ಯವಸ್ಥೆ ಮಾಡಿದ್ದಾರೆ.
ಇದೇ ವೇಳೆ ಮರವಂತೆಗೆ ಭೇಟಿ ಕೊಟ್ಟ ಡಿಡಿಪಿಐ ಎನ್. ಎಚ್.ನಾಗೂರ, ತಾವೇ ದೋಣಿ ಏರಿ ದ್ವೀಪಕ್ಕೆ ತೆರಳಿ ಪೋಷಕರ ಮನವೊಲಿಸಿ ಮಕ್ಕಳಿಬ್ಬರನ್ನೂ ಪರೀಕ್ಷಾ ಕೇಂದ್ರಕ್ಕೆ ಕರೆ ತಂದಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಅದೇ ದೋಣಿಯಲ್ಲಿ ಮತ್ತೆ ಅವರನ್ನು ಮನೆಗೆ ಬಿಟ್ಟು ಬರಲಾಗಿದೆ. ಇದೀಗ ಡಿಡಿಪಿಐ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.
Discussion about this post