ನವದೆಹಲಿ : ಇತ್ತೀಚಿನ ದಿನಗಳಲ್ಲಿ ಮ್ಯಾಟ್ರಿಮೋನಿ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದೆ. ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇರ್ತಾರೆ ಅನ್ನುವಂತೆ ಮ್ಯಾಟ್ರಿಮೋನಿಗಳಲ್ಲಿ ಆಗೋ ದೋಖಾಗಳಿಗೆ ಲೆಕ್ಕವಿಲ್ಲ.
ಕೆಲವೊಂದು ಕಡೆಗಳಲ್ಲಿ ಹುಡುಗರೇ ಮೋಸ ಮಾಡಿದ್ರೆ, ಮತ್ತೆ ಕೆಲವು ಪ್ರಕರಣದಲ್ಲಿ ಹುಡುಗಿಯರೇ ಹುಡುಗರಿಗೆ ಪಂಗನಾಮ ಎಳೆದಿದ್ದಾರೆ. ಆದರೆ ನಾವು ಈಗ ಹೇಳ್ತಿರೋ ಸುದ್ದಿ ಸ್ವಲ್ಪ ಡಿಫರೆಂಟ್.
ಮಗಳ ಮದುವೆ ಸಲುವಾಗಿ ಹರ್ಯಾಣ ಪಂಚಕುಲ ಮೂಲದ ಪವನ್ ಕುಮಾರ್ ಶರ್ಮಾ ದಿಲ್ಲಿ ಮೂಲದ ಸೈಕೋರಿಯನ್ ಮ್ಯಾಟ್ರಿಮೋನಿಯನ್ ಸರ್ವಿಸ್ ಲಿಮಿಟೆಡ್ ಮೊರೆ ಹೋಗಿದ್ದರು.
ಬ್ಯಾಂಕ್ ಹುದ್ದೆಯಲ್ಲಿರುವ ನನ್ನ ಮಗಳಿಗೆ ಸೂಕ್ತವಾದ ವರನನ್ನು ಹುಡುಕುವಂತೆ ಬೇಡಿಕೆ ಇಟ್ಟಿದ್ದ ಅವರು 2017ರಲ್ಲಿ 85,500 ರೂಪಾಯಿಯನ್ನು ಪಾವತಿಸಿದ್ದರು ಕೂಡಾ.
ಆದರೆ ಸೈಕೋರಿಯನ್ ಮ್ಯಾಟ್ರಿಮೋನಿಯನ್, ಮದುವೆ ಮಾತುಕತೆಗಾಗಿ ಶಾರ್ಟ್ ಲಿಸ್ಟ್ ಮಾಡಿದ್ದ ವ್ಯಕ್ತಿಗಳ ಜೊತೆ ಸಭೆ ಏರ್ಪಡಿಸುವಲ್ಲಿ ಪದೇ ಪದೇ ವಿಫಲವಾಗಿತ್ತು. ಹೀಗಾಗಿ ಇದ್ಯಾಕೋ ಸರಿ ಹೊಂದುತ್ತಿಲ್ಲ ಎಂದು ಪವನ್ ಕುಮಾರ್ ಪ್ರೊಫಲ್ ರದ್ದುಗೊಳಿಸಿ ಹಣ ಹಿಂತಿರುಗಿಸುವಂತೆ ಕೋರಿಕೊಂಡಿದ್ದರು. 3 ಪತ್ರ ಬರೆದರೂ ಸೈಕೋರಿಯನ್ ಮ್ಯಾಟ್ರಿಮೋನಿಯನ್ ಸಂಸ್ಥೆ ಕ್ಯಾರೆ ಅಂದಿರಲಿಲ್ಲ.
ಹೀಗಾಗಿ ಗ್ರಾಹಕರ ವೇದಿಕೆ ಮೆಟ್ಟಿಲು ಹತ್ತಿದ ಶರ್ಮಾ ತನಗಾದ ಅನ್ಯಾಯಕ್ಕೆ ನ್ಯಾಯ ಕೊಡಿ ಅಂದಿದ್ದರು. ವಾದ ಆಲಿಸಿದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ, ಪವನ್ ಕುಮಾರ್ ಪಾವತಿಸಿದ್ದ 85,500ರ ಪೈಕಿ 64 ಸಾವಿರ ರೂಪಾಯಿ ಜೊತೆಗೆ 15 ಸಾವಿರ ರೂಪಾಯಿ ಪರಿಹಾರ ಮತ್ತು 7 ಸಾವಿರ ರೂಪಾಯಿ ಕೇಸಿನ ವೆಚ್ಚವನ್ನು ನೀಡುವಂತೆ ಆದೇಶಿಸಿತ್ತು.
ಇದೀಗ ಮೇಲ್ಮನವಿ ಸಲ್ಲಿಸದ ಸೈಕೋರಿಯನ್ ಮ್ಯಾಟ್ರಿಮೋನಿಯನ್ ಸಂಸ್ಥೆ ಹಣ ಪಾವತಿಸಿ ಕೈ ತೊಳೆದುಕೊಂಡಿದೆ.
Discussion about this post