ಮಂಗಳೂರು : ವುಹಾನ್ ವೈರಸ್ ಅನ್ನುವ ಮಹಾಮಾರಿಯಿಂದ ಕಂಗಲಾಗದವರು ಯಾರಿದ್ದಾರೆ ಹೇಳಿ. ಬಹುತೇಕರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ ಕಮ್ಯುನಿಸ್ಟ್ ರಾಷ್ಟ್ರದ ವೈರಸ್. ಈ ನಡುವೆ ಕೊರೋನಾ ವೈರಸ್ ಕಾರಣದಿಂದ ಕೆಲಸ ಕಳೆದುಕೊಂಡ ಛಲಗಾರರು ಮತ್ತೊಂದು ಉದ್ಯೋಗದ ಮೇಲೆ ಎದ್ದು ನಿಂತಿದ್ದಾರೆ.
ಹೀಗೆ ಮಂಗಳೂರಿನ ವಕೀಲೆಯೊಬ್ಬರು ಕೊರೋನಾ ಕಾರಣದಿಂದ ಆದಾಯಕ್ಕೆ ಕುತ್ತು ಬಂದ ಸಂದರ್ಭದಲ್ಲಿ ತಾರಸಿಯಲ್ಲಿ ಮಲ್ಲಿಗೆ ಕೃಷಿ ಮಾಡುವ ಮೂಲಕ ಆದಾಯದ ಮೂಲವೊಂದನ್ನು ಕಂಡುಕೊಂಡಿದ್ದಾರೆ. ಏನಿಲ್ಲ ಅಂದರೂ ತಿಂಗಳಿಗೆ 15 ಸಾವಿರ ರೂಪಾಯಿ ಆದಾಯವನ್ನು ಮಲ್ಲಿಗೆ ಮೂಲಕ ಇವರು ಪಡೆಯುತ್ತಿದ್ದಾರೆ.
ಕೊರೋನ ಮೊದಲ ಆಲೆಯ ಸಂದರ್ಭದಲ್ಲಿ ಲಾಕ್ ಡೌನ್ ಹೇರಿದ ವೇಳೆ ಕೋರ್ಟ್ ಗಳು ಕೂಡಾ ಬಾಗಿಲು ಹಾಕಿತ್ತು. ಹೀಗಾಗಿ ಮಂಗಳೂರಿನ ವಕೀಲೆ ಕಿರಣ ದೇವಾಡಿಗ ಕೈ ಕಟ್ಟಿ ಕೂರುವಂತಾಯ್ತು. ಹಾಗಂತ ಕಿರಣ ಕೈ ಕಟ್ಟಿ ಕೂರಲಿಲ್ಲ. ಬದಲಿಗೆ ಮಲ್ಲಿಗೆ ಕೃಷಿ ಮಾಡಿ ಆದಾಯ ಸಂಪಾದಿಸಬಾರದ್ಯಾಕೆ ಎಂದು ಯೋಚಿಸಿದರು. ಹಾಗಂತ ತಡ ಮಾಡಲಿಲ್ಲ. ಮಂಗಳೂರಿನ ಸಹ್ಯಾದ್ರಿ ನರ್ಸರಿಯಿಂದ 100 ಉಡುಪಿ ಮಲ್ಲಿಗೆ ಗಿಡ, ಮಣ್ಣು ಸಾವಯತವ ಗೊಬ್ಬರಗಳನ್ನು ತಂದರು. ಜೊತೆಗೆ 100 ಪಾಟ್ ಗಳನ್ನೂ ತಂದರು.
ಈ ವೇಳೆ ಇಂತಹುದೊಂದು ಪ್ರಯತ್ನ ಬೇಡ, ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ಬರಬಹುದು ಅನ್ನುವ ಎಚ್ಚರಿಕೆಯನ್ನೂ ಹಲವಾರು ಮಂದಿ ಕೊಟ್ಟಿದ್ದರು. ಹಾಗಂತ ಆ ಸಲಹೆಗಳನ್ನು ಕಿರಣ ದೇವಾಡಿಗ ನಿರ್ಲಕ್ಷ್ಯ ಮಾಡಲಿಲ್ಲ.
ಇನ್ನು ಪತ್ನಿಯ ಪ್ರಯತ್ನಕ್ಕೆ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಪತಿ ಮಹೇಶ್ ಕೂಡಾ ಸಾಥ್ ಕೊಟ್ಟರು. ಇಬ್ಬರ ಪರಿಶ್ರಮದೊಂದಿಗೆ ದೇರೆಬೈಲ್ ಕೊಂಚಾಡಿಯ ಮನೆಯ ತಾರಸಿಯಲ್ಲಿ ಮಲ್ಲಿಗೆ ಗಿಡದ ತೋಟ ತಲೆ ಎತ್ತಿತ್ತು. ಗಿಡದಲ್ಲಿ ಮಲ್ಲಿಗೆ ಅರಳುವ ಹೊತ್ತಿಗೆ ಹೂ ಕಟ್ಟುವುದನ್ನು ಕಲಿತ ಕಿರಣ ದೇವಾಡಿಗ ಮಲ್ಲಿಗೆ ಮಾರಿಗೆ ಈ ವರೆಗೆ 85 ಸಾವಿರ ಹಣವನ್ನು ಸಂಪಾದಿಸಿದ್ದಾರೆ.
Discussion about this post