ಮಂಗಳೂರು : ಪತ್ನಿ ಮತ್ತು ಮೂವರು ಮಕ್ಕಳನ್ನು ಬಾವಿಗೆ ನೂಕಿ ತಾನೂ ಆತ್ಮಹತ್ಯೆಗೆ ಯತ್ನಿಸಿ ಕೊಲೆ ಮಾಡಿದ ಪ್ರಕರಣ ಸಂಬಂಧ, ಬದುಕುಳಿದ ಆರೋಪಿ ತಂದೆ ವಿರುದ್ಧ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹಿತೇಶ್ ಶೆಟ್ಟಿಗಾರ್ ಎಂಬಾತನನ್ನು ಬಂಧಿಸಲಾಗಿದೆ.
ಮಂಗಳೂರು ಹೊರವಲಯದ ಕಿನ್ನಿಗೋಳಿ ಪದ್ಮನೂರು ಶೆಟ್ಟಿಗಾಡುವಿನಲ್ಲಿ ಗುರುವಾರ ಸಂಜೆ ಈ ದುರ್ಘಟನೆ ಸಂಭವಿಸಿತ್ತು. ದುರ್ಘಟನೆಯಲ್ಲಿ ರಶ್ಮಿತಾ (14), ಉದಯ್ (11) ಮತ್ತು ದಕ್ಷಿತ್ (4) ಮೃತಪಟ್ಟಿದ್ದು, ಪತ್ನಿ ಲಕ್ಷ್ಮಿ ಹಾಗೂ ಪತಿ ಹಿತೇಶ್ ನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಆರೋಪಿ ಹಿತೇಶ್ ತನ್ನ ಮನೆ ಪಕ್ಕದ ಮುಖ್ಯ ರಸ್ತೆಯಲ್ಲಿ ತೆಂಗಿನಕಾಯಿ ಮತ್ತು ಹಲಸು ವ್ಯಾಪಾರ ಮಾಡಿಕೊಂಡಿದ್ದ. ಪತ್ನಿ ಲಕ್ಷ್ಮಿ ಬೀಡಿ ಕಟ್ಟುತ್ತಿದ್ದರು. ಜೊತೆಗೆ ಸಮೀಪದ ಅಂಗಡಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಗುರುವಾರ ಬೆಳಗ್ಗೆ ಶಾಲೆಗೆ ಹೋಗಿದ್ದ ಮಕ್ಕಳು ಮನೆಗೆ ಬರುತ್ತಿದ್ದಂತೆ, ಅವರನ್ನು ಬಾವಿ ಸಮೀಪ ಕರೆದುಕೊಂಡು ಹೋಗಿ ಮೂವರು ಮಕ್ಕಳನ್ನೂ ಬಾವಿಗೆ ನೂಕಿ ಕೊಂದಿದ್ದಾನೆ.
ಸಂಜೆ ಪತ್ನಿ ಮನೆಗೆ ಬಂದು ಮಕ್ಕಳು ಎಲ್ಲಿ ಎಂದು ಕೇಳಿದಾಗ ಎಲ್ಲೋ ಆಟವಾಡುತ್ತಿರಬೇಕು ಅಂದಿದ್ದಾನೆ. ಆದರೆ ತಾಯಿ ಮನಸ್ಸು ಕೇಳಲಿಲ್ಲ. ಮನೆಯ ವಾತಾವರಣ ಹಾಗಿರಲಿಲ್ಲ. ಹೀಗಾಗಿ ಅನುಮಾನಗೊಂಡ ಸಮೀಪದ ಬಾವಿ ಬಳಿಗೆ ಬಂದು ನೋಡುತ್ತಿದ್ದಂತೆ, ಹಿಂದೆಯೇ ಬಂದ ಹಿತೇಶ್ ಲಕ್ಷ್ಮಿಯನ್ನೂ ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿದ್ದಾನೆ.
ಈ ವೇಳೆ ಲಕ್ಷ್ಮಿಯವರ ಬೊಬ್ಬೆ ಕೇಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ, ಗಂಡ – ಹೆಂಡತಿ ಇಬ್ಬರನ್ನೂ ರಕ್ಷಿಸಿದ್ದಾರೆ. ಅಷ್ಟು ಹೊತ್ತಿಗೆ ಮಕ್ಕಳು ಮೃತಪಟ್ಟಿದ್ದರು.
ಶೆಟ್ಟಿಗಾರ್ ಇಡೀ ಕುಟುಂಬವನ್ನು ಕೊಂದು ತಾನೂ ಸಾಯಲು ನಿರ್ಧರಿಸಿದ್ದು ಯಾಕೆ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ.
Discussion about this post