ತಮಿಳುನಾಡು : ಕೊರೋನಾ ಸಲುವಾಗಿ ಹೇರಿರುವ ಲಾಕ್ ಡೌನ್ ಅನೇಕ ಉದ್ಯಮಗಳನ್ನು ನೆಲ ಕಚ್ಚಿಸಿದೆ. ಅದರಲ್ಲೂ ಹೊಟೇಲ್ ಉದ್ಯಮದ ಸಂಕಷ್ಟ ಹೇಳತೀರದಾಗಿದೆ. ಹಾಕಿರುವ ಬಂಡವಾಳ ಬಂದ್ರೆ ಸಾಕು ಅನ್ನುವ ಪರಿಸ್ಥಿತಿ ಮಾಲೀಕರದ್ದು.
ಈ ನಡುವೆ ತಮಿಳುನಾಡು ಮಧುರೈನ ಸುಕನ್ಯ ಬಿರಿಯಾನಿ ಮಾಲೀಕರು ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ತಮ್ಮ ಬಿರಿಯಾನಿ ಶಾಪ್ ಪುನರಾರಂಭಗೊಳಿಸಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿದ್ದ ಅವರು ನಷ್ಟದಲ್ಲಿದ್ದರು. ಹೀಗಾಗಿ ಹೇಗಾದ್ರೂ ಸರಿ ಗ್ರಾಹಕರನ್ನು ಸೆಳೆಯುವುದು ಅನಿವಾರ್ಯವಾಗಿತ್ತು.
ಹೀಗಾಗಿ ಉದ್ಘಾಟನಾ ಆಫರ್ ಎಂದು ಬಂಪರ್ ಆಫರ್ ಘೋಷಿಸಿದ್ದಾರೆ. ಹಳೆಯ 5 ಪೈಸೆ ನಾಣ್ಯವನ್ನು ತಂದವರಿಗೆ ಒಂದು ಪ್ಲೇಟ್ ಬಿರಿಯಾನಿ ಎಂದು ಮಧುರೈ ಸುತ್ತಮುತ್ತ ಭರ್ಜರಿ ಪ್ರಚಾರ ಮಾಡಿದ್ದಾರೆ. ಈಗಿನ ಕಾಲದಲ್ಲಿ 5 ಪೈಸೆ ಯಾರ ಬಳಿ ಇರುತ್ತದೆ, ಬಂದ್ರೆ ಒಂದು ನೂರು ಜನ ಬರಬಹುದು ಅನ್ನುವುದು ಅವರ ಊಹೆಯಾಗಿತ್ತು.
ಆದರೆ ಅಂಗಡಿ ತೆರೆದ ಕೆಲವೇ ಹೊತ್ತಿನಲ್ಲಿ 300ಕ್ಕೂ ಅಧಿಕ ಗ್ರಾಹಕರು 5 ಪೈಸೆ ಕಾಯಿನ್ ಹಿಡಿದು ಕ್ಯೂ ನಿಂತಿದ್ದರು. ಪರವಾಗಿಲ್ಲ ಇವರನ್ನು ಸುಧಾರಿಸಬಹುದು ಅನ್ನುವಷ್ಟು ಹೊತ್ತಿಗೆ, ಮಧುರೈ ಊರಿನ ಜನ ಅಕ್ಕ ಪಕ್ಕದವರನ್ನು ಎಬ್ಬಿಸಿಕೊಂಡು ಬಂದು ಕ್ಯೂ ನಿಲ್ಲಲಾರಂಭಿಸಿದ್ದಾರೆ. ಬಿರಿಯಾನಿಗಾಗಿ ನಿಂತವರ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಿತ್ತು.
ಅಷ್ಟು ಹೊತ್ತಿಗೆ ಮಾಲೀಕನಿಗೆ ಜ್ಞಾನೋದಯವಾಗಿದೆ. ಹೀಗೆ ಜನ ಸೇರಿರುವ ಸುದ್ದಿ ಪೊಲೀಸರ ಕಿವಿಗೆ ಮುಟ್ಟಿದ್ರೆ ನನಗೆ ಜೈಲು ಗ್ಯಾರಂಟಿ. ಕೊರೋನಾ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಕೇಸು ಜಡಿಯುತ್ತಾರೆ ಎಂದು ಭಯಗೊಂಡ ಮಾಲೀಕರ ಒಂದಿಷ್ಟು ಮಂದಿಗೆ ಬಿರಿಯಾನಿ ವಿತರಿಸಿ, ನೋ ಸ್ಟಾಕ್ ಬೋರ್ಡ್ ಹಾಕಿ ಶಟರ್ ಎಳೆದಿದ್ದಾರೆ.
ಅಷ್ಟು ಹೊತ್ತಿಗೆ ವಿಷಯ ಪೊಲೀಸರಿಗೆ ಗೊತ್ತಾಗಿದೆ. ಸ್ಥಳಕ್ಕೆ ಬಂದು ನೋಡಿದರೆ ಪಾಪ ಅದೆಷ್ಟು ದಿನವಾಯ್ತೋ ತಿನ್ನದೇ ಅನ್ನುವಂತೆ ಜನ ಸೇರಿದ್ದರು. 5 ಪೈಸೆಗೆ ಬಿರಿಯಾನಿ ಸಿಗುತ್ತದೆ ಎಂದು ಸಾಂಕ್ರಾಮಿಕ ರೋಗವನ್ನು ಲೆಕ್ಕಿಸಿದೆ ಜನ ಸೇರಿದ್ದು ಪೊಲೀಸರಿಗೆ ತಲೆ ತಿರುಗುವಂತೆ ಮಾಡಿತ್ತು. ಕೊನೆಗೆ ಲಾಠಿ ಬೀಸಿದ ಪೊಲೀಸರು, ಮೊದಲು ಕೊರೋನಾದಿಂದ ಕಾಪಾಡಿಕೊಳ್ಳಿ, ಆಮೇಲೆ ಬಿರಿಯಾನಿ ತಿನ್ನುವಿರಂತೆ ಅಂದಿದ್ದಾರೆ.
Discussion about this post