ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಒಮಿಕ್ರೋನ್ ರೂಪಾಂತರಿ ವೈರಸ್ ಅಟ್ಟಹಾಸವೂ ಮುಂದುವರಿದಿದೆ. ಈ ನಡುವೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ5ನ್ನು ದಾಟಿದರೆ ಅಥವಾ ಐಸಿಯು ಬೆಡ್ ಗಳು ಶೇ 40ರಷ್ಟು ಭರ್ತಿಯಾದರೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ರಾಜ್ಯದಲ್ಲಿ ಕೊರೋನ ಅಬ್ಬರ ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ಈ ಸಲಹೆ ನೀಡಲಾಗಿದ್ದು, ಪಾಸಿಟಿವಿಟಿ ದರಕ್ಕೆ ಅನುಗುಣವಾಗಿ ಲಾಕ್ ಡೌನ್ ಹೇರುವಂತೆ ಸಮಿತಿ ಸಲಹೆ ನೀಡಿದ್ದು, ಆ ಪ್ರಕಾರ ಕಡಿಮೆ ಪಾಸಿಟಿವಿಟಿ ದರ ಇರೋ ಪ್ರದೇಶ ಅಂದ್ರೆ ಶೇ 1 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರೋ ಪ್ರದೇಶವನ್ನು ಹಳದಿ ವಲಯ, ಮಧ್ಯಮ ಪಾಸಿಟಿವಿಟಿ ದರ ( ಶೇ1 ರಿಂದ ಶೇ 2 ) ದರ ಇರೋ ಪ್ರದೇಶವನ್ನು ಕಿತ್ತಳೆ ವಲಯ, ಹಾಗೂ ಶೇ 2ನ್ನು ದಾಟಿದ ಪ್ರದೇಶವನ್ನು ರೆಡ್ ಝೋನ್ ಎಂದು ಗುರುತಿಸಿ ನಿರ್ಬಂಧ ವಿಧಿಸುವಂತೆ ಸಮಿತಿ ಸೂಚಿಸಿದೆ.
ಹಳದಿ ವಲಯದಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಕಡ್ಡಾಯ. ಮಾಲ್, ಸಿನಿಮಾ ಥಿಯೇಟರ್, ಶಾಪಿಂಗ್ ಕಾಂಪ್ಲೆಕ್ಸ್, ಶಾಲಾ ಕಾಲೇಜು, ಹೋಟೆಲ್ , ಸಲೂನ್, ಜಿಮ್ ಹೀಗೆ ಬಹುತೇಕ ಚಟುವಟಿಕೆಗಳು ಎಂದಿನಂತೆ ನಡೆಯಬಹುದಾಗಿದೆ. ಮದುವೆ ಹಾಗೂ ಜನ ಸೇರುವ ಕಾರ್ಯಕ್ರಮಗಳಿಗೆ ಕೇವಲ 300 ಮತ್ತು ಅಂತ್ಯಕ್ರಿಯೆಗೆ 200 ಜನ ಸೇರಲು ಅವಕಾಶ ನೀಡಬಹುದಾಗಿದೆ.
ಕಿತ್ತಳೆ ವಲಯದಲ್ಲಿ ಮಾಲ್ , ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 1ರ ತನಕ ಮಾತ್ರ ತೆರೆಯಬೇಕು. ಶಾಲೆ, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ 50-50 ಸೂತ್ರವನ್ನು ಜಾರಿಗೊಳಿಸಬೇಕು. ಮದುವೆ ಸೇರಿ ಇತರ ಕಾರ್ಯಕ್ರಮಕ್ಕೆ 200 ಮಂದಿಗೆ ಅವಕಾಶ ಮತ್ತು ಅಂತ್ಯಕ್ರಿಯೆಗೆ ಕೇವಲ 100 ಮಂದಿ ಸೇರಬಹುದು.
ಕೆಂಪು ವಲಯದಲ್ಲಿ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಸ್ಥಗಿತವಾಗಲಿದ್ದು, ಸಾರ್ವಜನಿಕ ಸಾರಿಗೆಯೂ ಬಂದ್ ಆಗಲಿದೆ. ಕಚೇರಿ, ಶಾಲೆ ಆನ್ ಲೈನ್ ನಲ್ಲಿ ನಡೆಯಲಿದೆ. ಹೋಟೆಲ್ ಬಾರ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಸಿಗಬೇಕು ಎಂದು ತಾಂತ್ರಿಕ ಸಮಿತಿ ಸಲಹೆ ನೀಡಿದೆ.
ಇನ್ನು ಒಮಿಕ್ರೋನ್ ಅಪಾಯವನ್ನು ಅರಿಯಲು ಅಸಾಧ್ಯವಾಗಿರುವ ಹಿನ್ನಲೆಯಲ್ಲಿ ಸೌಮ್ಯ ರೋಗ ಲಕ್ಷಣ ಹೊಂದಿದವರಿಗೆ ಮಾತ್ರ ಹೋಮ್ ಐಸೋಲೇಷನ್ ನೀಡಬೇಕು, ಉಳಿದವರ ಆರೈಕೆಗೆ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರ ತೆರೆಯುವಂತೆ ಸಲಹೆ ನೀಡಲಾಗಿದೆ.
Discussion about this post