ಮಂಗಳೂರು : ಹಿಂದೂ ದೇವಸ್ಥಾನಗಳ ಜಾತ್ರೆ, ಉತ್ಸವಗಳಲ್ಲಿ ಧಾರ್ಮಿಕ ದತ್ತಿ ನಿಯಮ ಪಾಲಿಸುವಂತೆ ಆಗ್ರಹಿಸಿ ನಡೆದಿದ್ದ ಹೋರಾಟ ಇದೀಗ ಮತ್ತೆ ಮುಂದುವರಿದಿದೆ. ಹಿಂದೂ ದೇವಾಲಯಗಳಲ್ಲಿ ಹಿಂದೂಯೇತರ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಅನ್ನುವ ಹೋರಾಟ ಮತ್ತೆ ಪ್ರಾರಂಭವಾಗಿದೆ.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನಿಯಮ ಪಾಲಿಸಲಾಗಿಲ್ಲ ಅನ್ನುವ ಆರೋಪ ಕೇಳಿ ಬಂದಿದ್ದು, ಹಿಂದೂಯೇತರರಿಗೆ ಬಾಳೆಹಣ್ಣು ಸರಬರಾಜು ಟೆಂಡರ್ ಕೊಟ್ಟಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸೇವೆಗೆ ಬೇಕಾಗುವ ಉತ್ತಮ ದರ್ಜೆಯ ಬಾಳೆಹಣ್ಣನ್ನು 2021 ಜುಲೈ 1 ರಿಂದ 2022ರ ಜೂನ್ 30ರ ತನಕ ಸರಬರಾಜು ಮಾಡಲು ಕೊಟೇಷನ್ ಕರೆಯಲಾಗಿತ್ತು. ಮೂವರು ಹಿಂದೂಯೇತರರು ಸೇರಿ, ಒಬ್ಬರು ಹಿಂದು ವ್ಯಾಪಾರಸ್ಥರು ದರಪಟ್ಟಿ ಕೊಟ್ಟಿದ್ದರು,
ಈ ಪೈಕಿ ಮಂಗಳೂರು ಸೆಂಟ್ರಲ್ ಮಾರುಕಟ್ಟೆಯ ಎಂಕೆ ಹಂಝ ಪ್ರತೀ ಬಾಳೆ ಹಣ್ಣಿಗೆ 1.95 ಪೈಸೆ ದರ ನಮೂದಿಸಿದ್ದರು. ಇದು ಅತ್ಯಂತ ಕಡಿಮೆ ದರವಾಗಿದ್ದ ಹಿನ್ನಲೆಯಲ್ಲಿ ಟೆಂಡರ್ ಅವರ ಪಾಲಾಗಿತ್ತು.
ಇದೀಗ ಟೆಂಡರ್ ಅವಧಿ ಮುಕ್ತಾಯವಾಗುತ್ತಾ ಬಂದಿದ್ದು, ಮುಂದಿನ ಸಾಲಿಗೆ ಟೆಂಡರ್ ಕರೆಯಲು ದೇವಸ್ಥಾನದ ಆಡಳಿತಾಧಿಕಾರಿ ಸಿದ್ದತೆ ಪ್ರಾರಂಭಿಸಿದ್ದಾರೆ. ಹೀಗಾಗಿ ಹೋರಾಟದ ಎಚ್ಚರಿಕೆ ನೀಡಿರುವ ಹಿಂದೂ ಸಂಘಟನೆಗಳು, ಧಾರ್ಮಿಕ ದತ್ತಿ ಇಲಾಖಾ 2002-03ರ ತಿದ್ದುಪಡಿ ನಿಯಮದ ಪ್ರಕಾರ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಅನ್ಯ ಮತೀಯರಿಗೆ ವಹಿವಾಟು ನೀಡುವಂತಿಲ್ಲ. ಹಾಗಿದ್ದರೂ ಅನ್ಯಮತೀಯರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ನಿಯಮ ಪಾಲಿಸುವಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರಿಗೆ ಹಿಂದೂ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.
ಇದಕ್ಕೆ ಸಕಾರಾತ್ಮವಾಗಿ ಪ್ರತಿಕ್ರಿಯಿಸಿರುವ ಕಾರ್ಯನಿರ್ವಹಣಾಧಿಕಾರಿ ಮುಂದಿನ ಅವಧಿಯ ಟೆಂಡರ್ ಅನ್ನು ನಿಯಮದ ಅನುಸಾರವೇ ಕರೆಯುವುದಾಗಿ ಹೇಳಿದ್ದಾರೆ.
Discussion about this post