ಬೆಂಗಳೂರು : ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರಿನ ಮಲ್ಲೇಶ್ವರದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಉದ್ಯೋಗಗಳಿಗೆ ಕೊರತೆ ಇಲ್ಲ. ಉದ್ಯೋಗಾವಕಾಶಗಳು ಸಾಕಷ್ಟಿದ್ದು, ಕೆಲಸ ಮಾಡಲು ಯುವಜನರು ಮುಂದೆ ಬರಬೇಕು ಅಂದರು.
ರಾಜ್ಯದಲ್ಲಿ ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಕೌಶಲ್ಯಯುತ ಮಾನವ ಸಂಪನ್ಮೂಲ ಒದಗಿಸುವುದು ಸರ್ಕಾರದ ಗುರಿಯಾಗಿದೆ. ಹೀಗಾಗಿ ಎಷ್ಟೇ ಪ್ರಮಾಣದ ಉದ್ಯೋಗಾಂಕ್ಷಿಗಳು ಬಂದರೂ ಸೂಕ್ತ ತರಬೇತಿ, ಭಾಷಾ ಜ್ಞಾನ, ಕೌಶಲ್ಯ ನೀಡಿ ಉದ್ಯೋಗಕ್ಕೆ ಸಜ್ಜು ಮಾಡಲಾಗುವುದು ಅಂದರು.

ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಕೌಶಲ್ಯ ಹೊಂದಿದ ಯುವಜನರಿಗೆ ಹೊರ ದೇಶಗಳಲ್ಲೂ ಉದ್ಯೋಗ ಕೊಡಿಸುವ ಕೆಲಸವನ್ನು ತಮ್ಮ ಇಲಾಖೆ ಮಾಡುತ್ತಿದೆ ಅಂದರು. ಇನ್ನು ಶುಕ್ರವಾರ ನಡೆದ ಉದ್ಯೋಗ ಮೇಳದಲ್ಲಿ 42 ಕಂಪನಿಗಳ ಪೈಕಿ 30 ಕಂಪನಿಗಳು ಭೌತಿಕವಾಗಿ ಅಭ್ಯರ್ಥಿಗಳ ಸಂದರ್ಶನ ನಡೆಸಿದರೆ, 12 ಕಂಪನಿಗಳು ಆನ್ ಲೈನ್ ಮೂಲಕ ಉದ್ಯೋಗಕಾಂಕ್ಷಿಗಳ ಸಂದರ್ಶನ ನಡೆಸಿದೆ.
ಈ ನಡುವೆ ಸರ್ಕಾರಿ ಕಾರ್ಯಕ್ರಮದಲ್ಲಿ ಎಂದಿನಂತೆ ಕನ್ನಡದ ಬಗ್ಗೆ ನಿರ್ಲಕ್ಷ್ಯ ಮುಂದುವರಿದಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ಇಂಗ್ಲೀಷ್ ಬೋರ್ಡ್ ಗಳು ರಾರಾಜಿಸುತ್ತಿತ್ತು. ಕನ್ನಡ ಒಂದು ಅಕ್ಷರವೂ ಅಲ್ಲಿರಲಿಲ್ಲ. ಕೆಲ ದಿನಗಳ ಹಿಂದಷ್ಟೇ ಮೆಟ್ರೋ ಉದ್ಘಾಟನೆ ಸಂದರ್ಭದಲ್ಲಿ ಕನ್ನಡದ ಅವಗಣನೆಯಾಗಿದೆ ಎಂದು ಪ್ರತಿಭಟಿಸಲಾಗಿತ್ತು. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವರ ಉಪಸ್ಥಿತಿಯಲ್ಲೇ ಕನ್ನಡವನ್ನು ಸೈಡಿಗಿಡಲಾಗಿದೆ.

Discussion about this post