ಬೆಂಗಳೂರು : ಮೂರನೇ ಅಲೆಯ ಆತಂಕದ ನಡುವೆ ರಾಜ್ಯಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಕರುನಾಡಿನಲ್ಲಿ ಕೊರೋನಾ ಅಬ್ಬರ ತೀವ್ರವಾಗಿ ಕಡಿಮೆಯಾಗಿದ್ದು, ರಾಜ್ಯದಲ್ಲಿ ಇಂದು 283 ಹೊಸ ಪ್ರಕರಣಗಳು ಪತ್ತೆಯಾಗಿದೆ. 6 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, 10 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.
ಇದರೊಂದಿಗೆ 290 ಮಂದಿ ಸೋಂಕು ಮುಕ್ತರಾಗಿ ಮನೆಗೆ ಮರಳಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 7,989ಕ್ಕೆ ಕುಸಿದಿದೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಶೇ 0.26ರಷ್ಟಿದ್ದು, ಮರಣ ಪ್ರಮಾಣ 2.12% ನಷ್ಟಿದೆ.
ಹಾಗಂತ ಕೊರೋನಾ ಸೋಂಕಿನ ಸಂಖ್ಯೆ ಕಡಿಮೆಯಾಯ್ತು ಅಂತಾ ಖುಷಿ ಪಡುವ ಸಮಯವೂ ಇದಲ್ಲ, ಯಾಕಂದ್ರೆ ಇಡೀ ರಾಜ್ಯದಲ್ಲಿ 1,05,278 ಮಂದಿಯನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಬೆಂಗಳೂರು ಒಂದರಲ್ಲಿ ಟೆಸ್ಟ್ ಮಾಡಬೇಕಾದ ಸಂಖ್ಯೆ. ಹಬ್ಬ, ಚುನಾವಣೆ, ಪುನೀತ್ ಅಂತ್ಯಸಂಸ್ಕಾರಗಳು ನಡೆದ ಹಿನ್ನಲೆಯಲ್ಲಿ ಕೊರೋನಾ ಟೆಸ್ಟ್ ಅನ್ನು ಹೆಚ್ಚಿಸಬೇಕು ಎಂದು ಈಗಾಗಲೇ ತಜ್ಞರು ಸಲಹೆ ಕೊಟ್ಟಿದ್ದಾರೆ. ಆದರೆ ಟೆಸ್ಟಿಂಗ್ ಪ್ರಮಾಣ ಏರಿಕೆಯಾಗಿಲ್ಲ. ಹೀಗಾಗಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿಲ್ಲ.
ಇನ್ನು ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರೇ ಪತ್ತೆಯಾಗಿಲ್ಲ.ಇನ್ನುಳಿದಂತೆ ಬೆಂಗಳೂರು ನಗರದಲ್ಲಿ 159, ಹಾಸನ 24, ಮೈಸೂರು 15, ಕೋಲಾರ 11 ಹಾಗೂ ದಕ್ಷಿಣ ಕನ್ನಡದಲ್ಲಿ 10 ಪ್ರಕರಣಗಳು ಪತ್ತೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಸಿಂಗಲ್ ಡಿಜಿಟ್ ನಲ್ಲಿದೆ.
Discussion about this post