ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ 1ರಷ್ಚು ಮೀಸಲಾತಿ ಕಲ್ಪಿಸುವ ಕುರಿತಂತೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಮೂಲಕ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಿದ ದೇಶದ ಮೊದಲ ರಾಜ್ಯ ಅನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ರಾಜ್ಯ ಮೀಸಲು ಪೊಲೀಸ್ ಪಡೆ ಹಾಗೂ ಬ್ಯಾಂಡ್ಸ್ ಮೆನ್ ಹುದ್ದೆಗಳ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸದಿರುವುದನ್ನು ಪ್ರಶ್ನಿಸಿ ಸಂಗಮ ಸಂಘಟನೆ ಪಿಐಎಲ್ ಸಲ್ಲಿಸಿತ್ತು. ಈ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸಿದ್ದ ಸಿಜೆ ಎ.ಎಸ್ ಓಕ್ ನೇತೃತ್ವದ ವಿಭಾಗೀಯ ಪೀಠ ಕೈಗೆತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಸರ್ಕಾರಿ ಪರ ವಕೀಲ ವಿಜಯ್ ಕುಮಾರ್ ಎ ಪಾಟೀಲ್, ರಾಜ್ಯದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಹಾರಿಜಾಂಟಲ್ ರಿಸರ್ವೇಷನ್ ಅನ್ನು ಈಗಾಗಲೇ ಕಲ್ಪಿಸಲಾಗಿದೆ. ಈ ಕುರಿತಂತೆ ಕರ್ನಾಟಕ ನಾಗರಿಕಾ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977ರ ನಿಯಮ 9ಕ್ಕೆ ತಿದ್ದುಪಡಿ ತರಲಾಗಿದೆ ಅಂದರು. ಈ ಸಂಬಂಧ ಜುಲೈ 6 ರಂದು ಅಂತಿಮ ಅಧಿಸೂಚನೆ ಕೂಡಾ ಹೊರ ಬಿದ್ದಿದೆ ಅಂದರು.
ಇದೇ ವೇಳೆ ಇದೇ ಪ್ರಕರಣ ಸಂಬಂಧ ಜೀವ ಸ್ವಯಂಸೇವಾ ಸಂಸ್ಥೆಯ ಹಿರಿಯ ವಕೀಲೆ ಜೇಯ್ಡಾ ಕೊಠಾರಿ , ಈ ತಿದ್ದುಪಡಿ ನಿಯಮ ಕೇವಲ ಸರ್ಕಾರಿ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ. ಹೀಗಾಗಿ ಸರ್ಕಾರ ನಿತರ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ನೇಮಕಾತಿಯಲ್ಲೂ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು. ಈ ವಾದವನ್ನು ಒಪ್ಪದ ನ್ಯಾಯ ಪೀಠ ಈ ಸಂಬಂಧ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸೂಚಿಸಿತು.
Discussion about this post