ಬೆಂಗಳೂರು : ಕೊರೋನಾ ಮೂರನೇ ಅಲೆ ನಿಯಂತ್ರಣ ಸಲುವಾಗಿ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ ವಿರುದ್ಧ ಜನಾಕ್ರೋಶ ತೀವ್ರವಾಗುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಅವೈಜ್ಞಾನಿಕವಾಗಿ ತಜ್ಞರು ನೀಡಿದ್ದ ವೀಕೆಂಡ್ ಕರ್ಫ್ಯೂ ರದ್ದು ಮಾಡಿ ಆದೇಶಿಸಿದೆ. ಈ ಮೂಲಕ ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ವಾರಾಂತ್ಯದ ಬಂದ್ ಅಂತ್ಯಗೊಂಡಿದೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ವಾರಾಂತ್ಯ ಕರ್ಫ್ಯೂ ಇಲ್ಲ ಅನ್ನುವ ಆದೇಶ ಹೊರಡಿಸಿದೆ. ಇನ್ನು ಈ ಆದೇಶದಿಂದ ಜನ ಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯ ಸರ್ಕಾರದ ಆದೇಶದಿಂದ ಪೊಲೀಸರ ಕಾಟ ತಪ್ಪಿತ್ತಲ್ಲ ಎಂಬ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಪೊಲೀಸರಿಂದ ಅದೆಷ್ಟು ಮಂದಿ ಹಿಂಸೆ ಅನುಭವಿಸಿದ್ದಾರೆ ಅನ್ನುವುದಕ್ಕೆ ಲೆಕ್ಕವಿಲ್ಲ.
ಇನ್ನು ನೈಟ್ ಕರ್ಫ್ಯೂ ಎಂದಿನಂತೆ ಮುಂದುವರಿಯಲಿದ್ದು, ಅದರಲ್ಲಿ ಒಂದು ಬದಲಾವಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ರಾತ್ರಿ 10ರ ಬದಲು ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆ ತನಕ ನೈಟ್ ಕರ್ಫ್ಯೂ ಜಾರಿಯಾಗುವ ವಿಶ್ವಾಸವಿತ್ತು. ಆದರೆ ನೈಟ್ ಕರ್ಫ್ಯೂ ಸಮಯದಲ್ಲಿ ಬದಲಾವಣೆ ತರದಿರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಎಂದಿಗಿಂತ ಕಟ್ಟುನಿಟ್ಟಾಗಿ ನೈಟ್ ಕರ್ಫ್ಯೂ ಜಾರಿಗೆ ನಿರ್ಧರಿಸಿದೆ.
ಇನ್ನೂ ಒಂದು ವಾರ ನೈಟ್ ಕರ್ಫ್ಯೂ ಮುಂದುವರಿಯಲಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದೆ ತೀರ್ಮಾ ಕೈಗೊಳ್ಳಲು ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Discussion about this post