ಮಂಗಳೂರು : ಕೊರೋನಾ ಅಬ್ಬರ ಕಡಿಮೆಯಾಯ್ತು ಅನ್ನುವಷ್ಟರಲ್ಲಿ ಕಾಣಿಸಿಕೊಂಡ ಹೊಸ ರೂಪಾಂತರ ವೈರಸ್ ಓಮಿಕ್ರಾನ್ ಆತಂಕ ಸೃಷ್ಟಿಸಿದೆ. ಈ ನಡುವೆ ಈ ಬಗ್ಗೆ ಬಗ್ಗೆ ಭಯ ಬೇಡ ಎಂದು ರಷ್ಯಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಮೆಲಿಟಾ ವುಜ್ನೋವಿಕ್ ಹೇಳಿದ್ದಾರೆ. ಈ ಬಗ್ಗೆ ಭೀತಿಗೊಳಗಾಗಲು ಯಾವುದೇ ಕಾರಣಗಳಿಲ್ಲ ಎಂದು ಮೆಲಿಟಾ ವುಜ್ನೋವಿಕ್ ಹೇಳಿದ್ದು, ಹೊಸ ವೈರಸ್ ಲಸಿಕೆಯನ್ನು ಬೈಪಾಸ್ ಮಾಡಿದರೆ, ಲಸಿಕೆಯ ಪರಿಣಾಮಕಾರಿತ್ವವನ್ನು ಎಷ್ಟು ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಎಂಬುದು ನಮಗೆ ಗೊತ್ತಿಲ್ಲ ಅಂದಿದ್ದಾರೆ.
ಹಾಗಂತ ಹೊಸ ವೈರಸ್ ಬಗ್ಗೆ ಆತಂಕ ಕಡಿಮೆಯಾಗಿಲ್ಲ. ಈಗಾಗಲೇ ಯಾವುದೇ ಲಸಿಕೆಗೆ ಬಗ್ಗದು ಅನ್ನಲಾಗಿರುವ ಓಮ್ರಿಕಾನ್ ಇದೀಗ 9 ದೇಶಗಳಿಗೆ ಹಬ್ಬಿದೆ. ಬೋಟ್ಸವಾಲಾ, ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ಇಸ್ರೇಲ್, ಸಿಂಗಾಪುರ, ಹಾಂಕಾಂಗ್ ನಲ್ಲಿ ಕಂಡು ಬಂದ ವೈರಸ್ ಇದೀಗ ಬ್ರಿಟನ್, ಚೆಕ್ ರಿಪಬ್ಲಿಕ್ ಮತ್ತು ಜರ್ಮನಿಯಲ್ಲೂ ಪತ್ತೆಯಾಗಿದೆ.
ಹೀಗಾಗಿಯೇ ಅಮೆರಿಕಾ, ಬ್ರಿಟನ್, ರಷ್ಯಾ, ಸಿಂಗಾಪುರ ಸೇರಿದಂತೆ ಹಲವಾರು ದೇಶಗಳು ದಕ್ಷಿಣ ಆಫ್ರಿಕಾ ಸೇರಿದಂತೆ ಸುತ್ತಮುತ್ತಲಿನ ದೇಶಗಳ ನಡುವಿನ ವಿಮಾನ ಸಂಚಾರ ನಿಷೇಧಿಸಿದೆ. ಆದರೆ ಭಾರತ ಮಾತ್ರ ಇನ್ನು ವಿಮಾನ ನಿಷೇಧಿಸುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಇದು ಆತಂಕಕ್ಕೆ ಕಾರಣವಾಗಿದೆ.
ಹಾಗಿದ್ದರೂ ಕರ್ನಾಟಕದಲ್ಲಿ ಹೊಸ ವೈರಸ್ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದ್ದು, ಹಲವಾರು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ ಕರ್ನಾಟಕದಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ಪತ್ತೆಯಾಗಿದೆ ಅನ್ನುವ ಸುದ್ದಿ ಹರಡಿದ್ದು, ಕರುನಾಡಿನಲ್ಲಿ ಆತಂಕ ಹುಟ್ಟಿಸಿದೆ.
ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಪ್ರತಿಕ್ರಿಯಿಸಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೋನಾ ಕೇಸ್ ಹೆಚ್ಚಳವಾಗಿದೆ., ಆದರೆ ರೂಪಾಂತರಿ ವೈರಸ್ ಪತ್ತೆಯಾಗಿಲ್ಲ. ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಹಿನ್ನಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅಂದಿದ್ದಾರೆ.
ಲಸಿಕೆ ಕುರಿತಂತೆ ಮಾಹಿತಿ ಕೊಟ್ಟಿರುವ ಬೊಮ್ಮಾಯಿ, ನಮ್ಮಲ್ಲಿ 80 ಲಕ್ಷ ಡೋಸ್ ಲಸಿಕೆ ಲಭ್ಯ ಇದೆ. ನಮ್ಮ ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ . ರಾಜ್ಯದಲ್ಲಿ ಮೊದಲ ಡೋಸ್ ವ್ಯಾಕ್ಸಿನೇಷನ್ ಶೇ.91 ರಷ್ಟಾಗಿದೆ.ಎರಡನೇ ಡೋಸ್ ಶೇ.58 ಆಗಿದೆ. ಈ ನಿಟ್ಟಿನಲ್ಲಿ ಸೆಕೆಂಡ್ ಡೋಸ್ ಹೆಚ್ಚಿಸಲು ಸೂಚಿಸಲಾಗಿದೆ. ಡಿಸೆಂಬರ್ ತಿಂಗಳ ಅಂತ್ಯಕ್ಕೆ ಸೆಕೆಂಡ್ ಡೋಸ್ ಶೇ.70 ರ ಗುರಿ ತಲುಪಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
Discussion about this post