ತೆಲಂಗಾಣ ಕರೀಂನಗರದಲ್ಲಿ ಕಿರುಚುವ ಹಾವೊಂದು ಕಾಣಿಸಿಕೊಂಡಿದೆ ಅನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೂರದ ತೆಲಂಗಾಣದಿಂದ ಕರ್ನಾಟಕದ ವಾಟ್ಸಾಪ್ ಗಳಿಗೆ ತಲುಪಿದ ಈ ವಿಡಿಯೋಗೆ ಇಲ್ಲಿನ ಮಂದಿ ಮತ್ತಷ್ಟು ರಂಗು ತುಂಬಿದರು.
ಕರ್ನಾಟಕ ಹಳ್ಳಿಯೊಂದರಲ್ಲಿ ಹಾವು ಕಾಣಿಸಿಕೊಂಡಿದೆ. ಇದು ಕಲಿಯುಗದ ಅಂತ್ಯ ಅನ್ನುವ ಬರಹಗಳನ್ನು ಸೇರಿಸಿ ಜನ ಹಂಚಲಾರಂಭಿಸಿದರು. ಆದರೆ ಇಷ್ಟು ಹೊತ್ತಿಗೆ ತೆಲಂಗಾಣ ಪೊಲೀಸರು ವಿಡಿಯೋ ಹಿಂದಿನ ಸತ್ಯದ ಹುಡುಕಾಟದಲ್ಲಿದ್ದರು.
ಪ್ರಾಥಮಿಕ ತನಿಖೆಯಲ್ಲೇ ಇದೊಂದು ಫೇಕ್ ವಿಡಿಯೋ ಅನ್ನುವುದು ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗಿ ಜನರನ್ನು ದಾರಿ ತಪ್ಪಿಸಿದ ಪುಣ್ಮಾತ್ಮನನ್ನು ಬಂಧಿಸಲೇಬೇಕು ಎಂದು ಪಣ ತೊಟ್ಟಿದ್ದರು.
ಪ್ರಕರಣ ದಾಖಲಿಸಿಕೊಂಡ ರಾಮಡುಗು ಪೊಲೀಸರು ಕೊನೆಗೆ ಕಿರುಚುವ ಹಾವಿನ ಸೃಷ್ಟಿಕರ್ತನನ್ನು ಬಂಧಿಸಿದ್ದಾರೆ. ಬಂಧಿತನನ್ನು ಲಿಂಗಂಪಲ್ಲಿ ಶ್ರೀನಿವಾಸು ಎಂದು ಗುರುತಿಸಲಾಗಿದೆ.
ಮನೆ ಪಕ್ಕದಲ್ಲಿ ಕ್ರಿಕೆಟ್ ಆಡಲು ಹುಡುಗರು ಬರುತ್ತಿದ್ದರು. ಇದರಿಂದ ಶ್ರೀನಿವಾಸ್ ಗೆ ಸಿಕ್ಕಾಪಟ್ಟೆ ತೊಂದರೆಯಾಗುತ್ತಿತ್ತು. ಹೀಗಾಗಿ ಹಾವು ಕಿರುಚೋ ವಿಡಿಯೋವನ್ನು ಶೇರ್ ಚಾಟ್ ನಿಂದ ಡೌನ್ ಲೋಡ್ ಮಾಡಿ ಮನೆ ಪಕ್ಕದಲ್ಲಿ ಕಿರಚುವ ಹಾವಿನ ಕಥೆ ಕಟ್ಟಿದ್ದ.
ಹಾಗೇ ನೋಡಿದರೆ ಈ ವಿಡಿಯೋ ಮೈಕ್ ಮಾರ್ಟಿನ್ ಅನ್ನೋ ಯೂ ಟ್ಯೂಬ್ ಚಾನೆಲ್ ನಲ್ಲಿ ಮೇ 5 ರಂದು ಅಪ್ ಲೋಡ್ ಆಗಿತ್ತು.
Discussion about this post