ಬೆಂಗಳೂರು : ಶತಾಯಗತಾಯ ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ಕುಮಾರಸ್ವಾಮಿ ಅದಕ್ಕಾಗಿ ವಿಭಿನ್ನ ರೀತಿಯ ಪ್ರಯತ್ನ ಪ್ರಾರಂಭಿಸಿದ್ದಾರೆ. ಪ್ರಯತ್ನ ನೋಡವುದಕ್ಕೆ ತುಂಬಾ ಚೆನ್ನಾಗಿದೆ. ಆದರೆ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಇದು ಫಲ ನೀಡುವ ಸಾಧ್ಯತೆಗಳು ತೀರಾ ಕಡಿಮೆ ಅನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
2023ರ ಮಿಷನ್ 123ಯ ಬೆನ್ನತ್ತಿರುವ ಕುಮಾರಸ್ವಾಮಿ ಈಗಾಗಲೇ ಸಂಘಟನಾ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಎರಡನೇ ಹಂತದ ಕಾರ್ಯಾಗಾರ ‘ಜನತಾ ಸಂಗಮ’ ಹೆಸರಿನಲ್ಲಿ ನಾಳೆಯಿಂದ ಪ್ರಾರಂಭವಾಗಲಿದೆ. ಮೊದಲ ಹಂತದ ಕಾರ್ಯಾಗಾರ ಬಿಡದಿಯ ತೋಟದಲ್ಲಿ ನಡೆದಿತ್ತು.
ಎರಡನೇ ಹಂತದ ಕಾರ್ಯಾಗಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆಯಲಿದ್ದು, ಹಾಲಿ, ಮಾಜಿ ಶಾಸಕರು, ಪಕ್ಷದ ಮುಖಂಡರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಾಗಾರ ನವೆಂಬರ್ 15ರ ತನಕ ನಡೆಯಲಿದ್ದು. ಪ್ರತಿ ನಿತ್ಯ ಎರಡು ಜಿಲ್ಲೆಗಳ ನಾಯಕರ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ಗೆಲುವಿನ ಕುರಿತಂತೆ ಸ್ಪಷ್ಟ ಹಾಗೂ ಕಠಿಣ ಸಂದೇಶವನ್ನು ಕುಮಾರಸ್ವಾಮಿ ರವಾನಿಸಲಿದ್ದಾರೆ.
ಈ ನಡುವೆ ಕಾರ್ಯಕರ್ತರನ್ನು ತಲುಪುವ ನಿಟ್ಟಿನಲ್ಲಿ ಕಸ್ತೂರಿ ಮತ್ತು ಕಸ್ತೂರಿ ನ್ಯೂಸ್ ಅನ್ನು ಮುನ್ನಡೆಸುತ್ತಿರುವ ಕುಮಾರಸ್ವಾಮಿ ಪಕ್ಷದ ವಿಚಾರಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ‘ಜನತಾ’ ಅನ್ನುವ ಮಾಸಿಕ ಪತ್ರಿಕೆಯೊಂದನ್ನು ಹೊರ ತರಲಿದ್ದಾರೆ. ಪಕ್ಷದ ಮುಖವಾಣಿಯಾಗಲಿರುವ ಜನತಾ ಪತ್ರಿಕೆಗೆ ಕುಮಾರಸ್ವಾಮಿಯವರೇ ಸಂಪಾದಕರಾಗಿರುತ್ತಾರೆ.
Discussion about this post