ಡಿಸೆಂಬರ್ ವೇಳೆಗೆ ಭಾರತದಲ್ಲಿ ವಯಸ್ಕರೆಲ್ಲರಿಗೂ ಲಸಿಕೆ ಹಾಕಲು ಸರ್ಕಾರ ಉದ್ದೇಶಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಲಸಿಕೆ ಪಡೆಯಲು ಜನ ಹಿಂಜರಿಯುತ್ತಿದ್ದಾರೆ, ಅಲ್ಲಿ ಹರಡಿರುವ ವದಂತಿಗಳಿಂದ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದೆ.
ಹೀಗಾಗಿ ಲಸಿಕೆ ಪಡೆಯುವುದನ್ನು ಉತ್ತೇಜೀಸಲು ಅನೇಕ ಆಫರ್ ಗಳನ್ನು ನೀಡಲಾಗುತ್ತಿದೆ. ಹಲವು ಕಡೆಗಳಲ್ಲಿ ಉಚಿತ ಅಕ್ಕಿ, ಉಚಿತ ಗೃಹೋಪಕರಣ ಹೀಗೆ ಬಹುಮಾನಗಳನ್ನು ನೀಡಲಾಗುತ್ತಿದೆ.
ಇದರ ಮುಂದುವರಿದ ಭಾಗವಾಗಿ ಮಧ್ಯಪ್ರದೇಶದ ಭೋಪಾಲ್ ನ ಬೆರಾಸಿಯಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿಷ್ಣು ಖತ್ರಿ ಅವರು, ವ್ಯಾಕ್ಸಿನೇಷನ್ ಉತ್ತೇಜಿಸಲು ಉಚಿತವಾಗಿ ಮೊಬೈಲ್ ರೀಚಾರ್ಜ್ ಮಾಡಿಸಲಾಗುವುದು ಎಂದು ಘೋಷಿಸಿದ್ದಾರೆ.
ಜೂನ್ 30 ರೊಳಗೆ ಲಸಿಕೆ ಪಡೆದುಕೊಳ್ಳುವ ತಮ್ಮ ಕ್ಷೇತ್ರದ ಎಲ್ಲಾ ಜನರಿಗೆ ಉಚಿತವಾಗಿ ಮೊಬೈಲ್ ರಿಚಾರ್ಜ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಇಂಡಿಗೋ ವಿಮಾನ ಸಂಸ್ಥೆ ಲಸಿಕೆ ಪಡೆದು ಪ್ರಯಾಣಿಸುವವರಿಗೆ ಶೇ 10ರಷ್ಟು ರಿಯಾಯತಿ ಘೋಷಿಸಿದೆ. ವೆಬ್ ಸೈಟ್ ಮೂಲಕ ಟಿಕೆಟ್ ಬುಕ್ ಪ್ರಯಾಣಿಸುವ ದೇಶಿಯ ಪ್ರಯಾಣಿಕರಿಗೆ ಮಾತ್ರ ಈ ಆಫರ್ ಲಭ್ಯವಿದ್ದು, ಒಂದು ಹಾಗೂ ಎರಡು ಡೋಸ್ ಪಡೆದವರಿಗೆ ಈ ರಿಯಾಯತಿ ಸಿಗಲಿದೆ. ಇದರ ಜೊತೆಗೆ ಮ್ಯಾಕ್ ಡೊನಾಲ್ಡ್ ಸಂಸ್ಥೆ ಶೇ20 ರಷ್ಟು ರಿಯಾಯತಿ ಘೋಷಿಸಿದೆ. ಸೆಂಟ್ರಲ್ ಬ್ಯಾಂಕ್ ಲಸಿಕೆ ಪಡೆದ ತನ್ನ ಉಳಿತಾಯ ಖಾತೆದಾರರಿಗೆ ಹೆಚ್ಚಿನ ಬಡ್ಡಿ ದರ ನೀಡುವುದಾಗಿ ಹೇಳಿದೆ.
Discussion about this post