ಹರಿಯಾಣದ ಬಹಾದ್ದೂರ್ ಗಢದ ಕಿಲ್ಲೆ ಮೊಹಾಲ್ಲಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಮೃತಪಟ್ಟ ಬಾಲಕ ಹಲವು ಗಂಟೆಗಳ ಬಳಿಕ ಬದುಕಿ ಬಂದಿದ್ದಾನೆ. ಈ ಘಟನೆ ಇದೀಗ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದ್ದು, ಈಗ್ಲೂ ದೇವರಿದ್ದಾನೆ ಅನ್ನುವುದಕ್ಕೆ ಸಾಕ್ಷಿ ಒದಗಿಸಿದೆ.
ಕಿಲೆ ಮೊಹಲ್ಲಾದ ಹಿತೇಶ್ ಹಾಗೂ ಜಾಹ್ನವಿ ದಂಪತಿಯ 6 ವರ್ಷದ ಮಗ ಟೈಫಾಯ್ಜ್ ಗೆ ತುತ್ತಾಗಿದ್ದ. ಈ ವೇಳೆ ದಂಪತಿ ಮಗನನ್ನು ರೋಹಕ್ತ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಬಾಲಕನನ್ನು ಪರಿಶೀಲನೆ ನಡೆಸಿದ ವೈದ್ಯರು ಬಾಲಕನನ್ನು ದೆಹಲಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಈ ನಡುವೆ ಮಗನನ್ನು ಬದುಕಿಸಲು ದಂಪತಿಗೆ ದೆಹಲಿಗೆ ದೌಡಾಯಿಸಿದರು. ಆಸ್ಪತ್ರೆಗೂ ಸೇರಿಸಿದರು. ಆದರೆ ಮೇ 26 ರಂದು ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಇನ್ನೇನು ಉಳಿದಿದೆ ಅಂದುಕೊಂಡ ದಂಪತಿ ಮಗನ ಶವದೊಂದಿಗೆ ಊರಿಗೆ ಆಗಮಿಸಿದ್ದಾರೆ. ಮನೆ ತಲುಪುವಷ್ಟು ಹೊತ್ತಿಗೆ ಕತ್ತಲಾಗಿದೆ. ಅಂತ್ಯಕ್ರಿಯೆ ನಡೆಸಲು ಸಾಧ್ಯವಿರಲಿಲ್ಲ. ಹೀಗಾಗಿ ಪಾರ್ಥಿವ ಶರೀರ ಕೆಡದಂತೆ, ಉಪ್ಪು, ಹಾಗೂ ಐಸ್ ಹಾಕಿ ಬಾಕ್ಸ್ ನಲ್ಲಿ ಇರಿಸಿದ್ದಾರೆ. ಈ ನಡುವೆ ತಾಯಿಯ ರೋಧನೆ ನಿಂತಿರಲಿಲ್ಲ. ಪದೇ ಪದೇ ಮಗುವಿನ ಪಾರ್ಥಿವ ಶರೀರ ಮುಟ್ಟಿ ಎದ್ದೇಳು ಮಗನೇ, ತಾಯಿ ಕರೆಯುತ್ತಿದ್ದೇನೆ ಎಂದು ಗೋಗರೆಯುತ್ತಿದ್ದಳು. ಅಮ್ಮ ಕರೆದರೂ ಮುನಿಸ್ಯಾಕೆ ನಿನಗೆ ಎಂದು ಮನವಿ ಮಾಡಿದರು ಮಗ ಸ್ಪಂದಿಸುತ್ತಿರಲಿಲ್ಲ. ಹೀಗೆ ಇಡೀ ರಾತ್ರಿ ಒಂದು ಬಾರಿ ಎದ್ದೇಳು ಅನ್ನುತ್ತಿದ್ದ ತಾಯಿ ಮಗನ ಹಣೆಗೆ ಮುತ್ತಿಡುತ್ತಿದ್ದಳು.
ಅಚ್ಚರಿ ಕೆಲವೇ ಗಂಟೆಗಳಲ್ಲಿ ಮೃತದೇಹದಲ್ಲಿ ಚಲನೆ ಪ್ರಾರಂಭವಾಗಿದೆ. ಅಂತ್ಯಸಂಸ್ಕಾರ ಸಲುವಾಗಿ ಸೇರಿದವರಿಗೆ ಒಂದು ಕ್ಷಣ ಅಚ್ಚರಿ. ಕನಸೋ ನನಸೋ ಎಂದು ಚಿವುಟಿ ನೋಡಿಕೊಳ್ಳುವಂತಾಗಿತ್ತು.
ಹಾಗಂತ ಸೇರಿದ್ದ ಜನ ತಡ ಮಾಡಲಿಲ್ಲ, ಬಾಲಕನ ಬಾಯಿಗೆ ಬಾಯಿ ಇಟ್ಟು ಉಸಿರಾಟ ನೀಡಲು ಪ್ರಯತ್ನಿಸಿದ್ದಾರೆ. ಕೆಲವರು ಕೈ ಕಾಲು ಉಜ್ಜಿದ್ದಾರೆ. ಈ ನಡುವೆ ಮಗನಿಗೆ ಉಸಿರಾಟ ನೀಡುತ್ತಿದ್ದ ತಂದೆ ತುಟಿಯನ್ನು ಒಂದ್ಸಲ ಕಚ್ಚಿದ್ದ ಬೇರೆ ಮಗ. ಹೀಗಾಗಿ ತಕ್ಷಣ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಅಲ್ಲಿಗೆ ಹೋದರೆ ಪೋಷಕರಿಗೆ ಮತ್ತೊಂದು ಶಾಕ್ ಮಗು ಬದುಕಿ ಉಳಿಯೋದು ಕಷ್ಟ. ಅಂದಿದ್ದಾರೆ ವೈದ್ಯರು. ಆದರೂ ಪೋಷಕರ ಒತ್ತಾಯಕ್ಕೆ ಮಣಿದ ಆಸ್ಪತ್ರೆಯವರು ಆಡ್ಮಿಟ್ ಮಾಡಿಕೊಂಡಿದ್ದಾರೆ. ಚಿಕಿತ್ಸೆಯನ್ನೂ ಕೊಟ್ಟಿದ್ದಾರೆ. ಅಚ್ಚರಿ ಅನ್ನುವಂತೆ ಬಾಲಕ ಚಿಕಿತ್ಸೆಗೆ ಸ್ಪಂದಿಸಿದ್ದಾನೆ. ಇದೀಗ ಬಾಲಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಮನೆ ಸೇರಿದ್ದಾನೆ.
Discussion about this post