ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆ ಪ್ರಾರಂಭಗೊಂಡಿದ್ದು, ದಿನದಿಂದ ದಿನಕ್ಕೆ ಸೋಂಕಿನ ಅಬ್ಬರ ತೀವ್ರವಾಗುತ್ತಿದೆ. ಬೆಂಗಳೂರು ಒಂದರಲ್ಲೇ ಗುರುವಾರ 10 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಈ ನಡುವೆ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಪ್ರಕರಣ ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಕೊರೋನಾ ಸೋಂಕು ಹರಡಬಹುದು ಅನ್ನಲಾದ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಮನಸ್ಸು ಮಾಡಿಲ್ಲ.
ಈ ನಡುವೆ ಮೊದಲ ಮತ್ತು ಎರಡನೇ ಅಲೆಯಲ್ಲಿ ಆಗಿರುವ ಅನಾಹುತಗಳು ಮೂರನೇ ಅಲೆಯಲ್ಲಿ ಸಂಭವಿಸಬಾರದು ಎಂದು ಹಲವು ಬಿಗಿ ಕ್ರಮಗಳು ಜಾರಿಯಲ್ಲಿದೆ. ಹೀಗಾಗಿ ಆಕ್ಸಿಜನ್, ಬೆಡ್, ಆಂಬುಲೆನ್ಸ್, ಟ್ರಯಾಜಿಂಗ್ ಸೆಂಟರ್ ಗಳೆಲ್ಲವನ್ನೂ ಸಿದ್ಧ ಮಾಡಿಕೊಳ್ಳಲಾಗುತ್ತಿದೆ
ಇದರೊಂದಿಗೆ ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಸೂಕ್ತ ವೈದ್ಯಕೀಯ ಹಾಗೂ ತುರ್ತು ಸೌಲಭ್ಯಗಳೊಂದಿಗೆ ಖಾಸಗಿಯವರು ಕೋವಿಡ್ ಕೇರ್ ಸೆಂಟರ್ ನಡೆಸಬಹುದಾಗಿದೆ. ಇನ್ನು ಕೋವಿಡ್ ಕೇರ್ ಸೆಂಟರ್ ನಡೆಸುವ ಖಾಸಗಿ ಆಸ್ಪತ್ರೆಗಳು ನಿಗದಿ ದರವನ್ನು ಪಡೆಯುವಂತೆ ಸರ್ಕಾರ ಸೂಚಿಸಿದ್ದು, ಬಜೆಟ್ ಕೇರ್ ಸೆಂಟರ್ ಪ್ರತಿ ದಿನ 4,000, 3 ಸ್ಟಾರ್ ಕೇರ್ ಸೆಂಟರ್ 8,000 ಮತ್ತು 5 ಸ್ಟಾರ್ ಕೋವಿಡ್ ಕೇರ್ ಸೆಂಟರ್ ಗಳು ದಿನಕ್ಕೆ 10,000 ರೂಪಾಯಿ ಹಣ ಪಡೆಯಬಹುದಾಗಿದೆ.
ರೋಗ ಲಕ್ಷಣಗಳು ಇಲ್ಲದ ಸೋಂಕಿತರಿಗೆ ಅವಕಾಶ ನೀಡುವುದು ಮತ್ತು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹಣ ವಸೂಲು ಮಾಡುವುದು ಹಾಗೂ ಸೋಂಕಿತ ಗುಣಮುಖನಾದ ಮೇಲೂ ಉಳಿಸಿಕೊಳ್ಳುವುದು ಅಪರಾಧವಾಗಲಿದೆ. ಹೀಗೆ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಹಾಗಂತ ಮೊದಲು ಹಾಗೂ ಎರಡನೇ ಅಲೆ ಸಂದರ್ಭದಲ್ಲೂ ಅನೇಕ ಆಸ್ಪತ್ರೆಗಳು ನಿಯಮ ಉಲ್ಲಂಘಿಸಿತ್ತು, ಅದ್ಯಾವ ಕ್ರಮ ಕೈಗೊಂಡಿದ್ದೇವೆ ಅನ್ನುವುದನ್ನು ಸರ್ಕಾರ ಇನ್ನೂ ತಿಳಿಸಿಲ್ಲ.
Discussion about this post