Saturday, February 27, 2021

ಸ್ವಾಭಿಮಾನದ ಭಿಕ್ಷೆ ಹಾಕಿ.. ಸೆರಗೊಡ್ಡಿ ಮತ ಭಿಕ್ಷೆ ಯಾಚಿಸಿದ ಸುಮಲತಾ ಅಂಬರೀಶ್

Must read

ನನ್ನ ಪತಿ ಅಂಬರೀಶ್ ಅವರ ಸಮಾಧಿ ಮೇಲೆ ಮುಖ್ಯಮಂತ್ರಿಗಳು ತಮ್ಮ ಮಗನ ರಾಜಕೀಯಕ್ಕೆ ನಾಂದಿ ಹಾಡಲು ಹೊರಟಿದ್ದಾರೆ ಎಂದು ಪದೇ ಪದೆ ಅಂಬಿ ಅಂತ್ಯಕ್ರಿಯೆ ವಿಷಯ ಪ್ರಸ್ತಾಪಿಸುತ್ತಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸುಮಲತಾ ಅಂಬರೀಶ್ ಅವರು ಮಂಗಳವಾರ ತಿರುಗೇಟು ನೀಡಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ನಗರದ ಸಿಲ್ವರ್‌ ಜ್ಯುಬಲಿ ಪಾರ್ಕ್‌ನಲ್ಲಿ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಭಾವನಾತ್ಮಕವಾಗಿ ಭಾಷಣ ಮಾಡಿದರು.

ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರವನ್ನು ತರಬೇಕೆಂದು ಹೇಳಿದ್ದು ನಾನೇ ಎಂದು ನಿಖಿಲ್‌ ಹೇಳಿಕೊಂಡಿದ್ದರು. ಆದರೆ ಅದು ಬರೀ ಸುಳ್ಳು. ಅದನ್ನು ಹೇಳಿದ್ದು ನನ್ನ ಪುತ್ರ ಅಭಿ ಮತ್ತು ಇತರೆ ನಾಯಕರು ಎಂದು ಸುಮಲತಾ ಬಹಿರಂಗಪಡಿಸಿದರು.

ಇದನ್ನು ನಾನು ಹೇಳಬಾರದಿತ್ತು. ಆದರೆ ಈ ರೀತಿ ಹೇಳುವಂತೆ ಒತ್ತಡ ಮಾಡಿದ್ದೇ ಮುಖ್ಯಮಂತ್ರಿಗಳು ಎಂದು ಸುಮಲತಾ ತಿಳಿಸಿದರು.

ಗಂಡ ಸತ್ತು ಹೆಂಡ್ತಿ ಕಣ್ಣೀರು ಹಾಕಿದ್ರೆ ನಾಟಕವೇ..?

ನನ್ನ ಪತಿ ನಿಧನರಾದ ಸಂದರ್ಭದಲ್ಲಿ ಅತ್ಯಂತ ದುಃಖವಾಗಿತ್ತು. ಇದನ್ನು ಯಾರಿಗೂ ಹೇಳಿಕೊಳ್ಳಲು ಆಗುವುದಿಲ್ಲ. ನಾನು ಆ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದು ಡ್ರಾಮಾ ಅಂತೆ. ಆದರೆ ಇವರು ಚುನಾವಣೆ ಸಂದರ್ಭದಲ್ಲಿ ಇಡೀ ಕುಟುಂಬವೇ ಮೈಕ್‌ ಮುಂದೆ ಬಂದು ಕಣ್ಣೀರು ಹಾಕುವುದು ನಾಟಕವಲ್ಲವಾ? ಎಂದು ಸುಮಲತಾ ಪ್ರಶ್ನಿಸಿದರು.

ಈ ನಾಲ್ಕು ವಾರಗಳಲ್ಲಿ ರಾಜಕಾರಣಿಗಳಲ್ಲಿ ರಾಕ್ಷಸತ್ವವನ್ನು ನೋಡಿದೆ. ನಿಜವಾಗಲೂ ಬೇಜಾರಾಗುತ್ತೆ. ಒಂದೇ ದಿನದಲ್ಲಿ ತೆಗೆದುಕೊಂಡಿರುವ ತೀರ್ಮಾನ ಇದಲ್ಲ. ಬಹಳಷ್ಟು ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದೆ.

ಒಂದಷ್ಟು ಸ್ನೇಹ ಸಂಬಂಧಗಳು ಹಾಳಾಗಬಹುದು ಎಂದು ಗೊತ್ತಿತ್ತು. ನಾನು ಮೊದಲನೇ ಹೆಜ್ಜೆ ಹಾಕಿದಾಗ ಅದು ಒಂಟಿ ಹೋರಾಟ, ಆದರೆ ಇವತ್ತು ನಾನು ಒಂಟಿಯಲ್ಲ. ಇವತ್ತು ನನ್ನ ಜೊತೆ ನಿಂತಿರುವ ಕಾಂಗ್ರೆಸ್‌ ಕಾರ್ಯಕರ್ತರಿಗೆ, ರೈತರ ಸಂಘಟಕ್ಕೆ, ಬಿಜೆಪಿ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ. ಪಕ್ಷದಿಂದ ಉಚ್ಛಾಟನೆಗೊಂಡರೂ ಸ್ವಾಭಿಮಾನಕ್ಕಾಗಿ ನನ್ನ ಜೊತೆ ಅವರೆಲ್ಲಾ ನಿಂತಿದ್ದಾರೆ. ಅವರ ಜೊತೆ ನಾನು ಯಾವತ್ತೂ ಇರ್ತೇನೆ ಎಂದರು.

ಪ್ರಚಾರ ಸಂದರ್ಭದಲ್ಲಿ ರೈತರ ಸಂಕಷ್ಟವನ್ನು ನೋಡಿದೆ. ಸುಳ್ಳು ಭರವಸೆ ಕೊಟ್ಟು ಓಟು ಪಡೆದುಕೊಂಡು ಹೋದವರು ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ಅಧ್ವಾನಗೊಂಡಿರುವ ರಸ್ತೆಗಳನ್ನು ನೋಡಿದೆ. ಬತ್ತಿ ಹೋಗಿರುವ ಕೆರೆಗಳನ್ನು ನೋಡಿದೆ. ದ್ವೇಷದ ರಾಜಕಾರಣ ಇಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಲೀಡ್‌ ಬಂದಿದೆ ಎಂಬ ಕಾರಣಕ್ಕೆ ಆ ಹಳ್ಳಿಗಳಲ್ಲಿ ಸರ್ಕಾರಿ ಕೆಲಸಗಳೇ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಈ ದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುವುದೇ ತಪ್ಪಾ? ಕಾನೂನುಬದ್ಧವಾಗಿ ನನಗಿರುವ ಹಕ್ಕು ಇದು ನಾನು ಮಂಡ್ಯದ ಸೊಸೆ, ಹಾಗಾಗಿ ನಾನು ಮಂಡ್ಯದಿಂದಲೇ ಸ್ಪರ್ಧಿಸುತ್ತಿದ್ದೇನೆ. ನಾನು ಈ ಮಣ್ಣಿನ ಸೊಸೆ ಅದಕ್ಕೆ ನಿಮ್ಮ ಪ್ರಮಾಣಪತ್ರ ಅಗತ್ಯವಿಲ್ಲ, ಜನ ನಮ್ಮನ್ನು ಸ್ವೀಕರಿಸಿದ್ದಾರೆ ಅಷ್ಟು ಸಾಕು ಎಂದರು.

ನಿಮಗೆ ಮಹಿಳೆಯರ ಬಗ್ಗೆ ಗೌರವವಿಲ್ಲ, ನಿಮಗೆ ದೇಶದ ಗಡಿ ಕಾಯುವ ಯೋಧರ ಬಗ್ಗೆ ಗೌರವವಿಲ್ಲ. ಎದುರಾಳಿಗೆ ಗೌರವವನ್ನು ಕೊಡುವುದನ್ನು ನೀವು ಕಲಿಯಬೇಕು. ದರ್ಶನ್‌ ಆಗ್ಲಿ ಯಶ್‌ ಆಗ್ಲಿ ಇಲ್ಲಿ ನಟರಾಗಿ ಪ್ರಚಾರಕ್ಕೆ ಬಂದಿಲ್ಲ ನನ್ನ ಮಕ್ಕಳಾಗಿ ನನ್ನ ಜೊತೆ ಇದ್ದಾರೆ ಎಂದು ಹೇಳಿದರು.

ಇದೇ ವೇಳೆ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಸುಮಲತಾ , ಡಿಕೆ ಶಿವಕುಮಾರ್ ಅವರು ನಿಖಿಲ್ ಕುಮಾರಸ್ವಾಮಿಗೆ ಮತ ಹಾಕಿದ್ರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಹೇಳುತ್ತಾರೆ. ಅಂಬರೀಶ್ ರಾಜಕೀಯದಲ್ಲಿ ಯಾರ ಬಗ್ಗೆಯೂ ಮಾತನಾಡಿಲ್ಲ. ಆದ್ರೆ ಅದೇ ಅಂಬರೀಶ್ ಅವರನ್ನು ರಾಜಕೀಯದಲ್ಲಿ ದ್ವೇಷ ಮಾಡುತ್ತಿದ್ದ ಓರ್ವ ವ್ಯಕ್ತಿ ಡಿ.ಕೆ.ಶಿವಕುಮಾರ್ ಎಂಬ ಗಂಭೀರ ಆರೋಪ ಮಾಡಿದರು.

ಮಂಡ್ಯದಲ್ಲಿ ಅಂತರಾಷ್ಟ್ರಿಯ ಮಟ್ಟದ ಕ್ರೀಡಾಂಗಣ ಮಾಡುವ ಉದ್ದೇಶ ಅಂಬರೀಶ್ ಅವರಿಗೆ ಇತ್ತು. ಮಂಡ್ಯ ರಸ್ತೆಗಳನ್ನ ಸಿಂಗಾಪುರದಂತೆ ಮಾಡುವ ಆಸೆ ಹೊಂದಿದ್ದರು. ಅಂಬಿ ಕನಸಿನ ಅಭಿವೃದ್ಧಿಯನ್ನು ಮುಂದಿವರಿಸಲು ನಾನು ಬಂದಿದ್ದು, ಆದರೆ ಎಲ್ಲವನ್ನು 1 ದಿನದಲ್ಲಿ ಮಾಡುತ್ತೇನೆ ಎಂಬ ಸುಳ್ಳು ಆಶ್ವಾಸನೆ ನೀಡಿಲ್ಲ.

ನನಗೆ ಒಂದು ಅವಕಾಶ ಕೊಟ್ಟು ನೋಡಿ ನಾನು ಅಂಬರೀಶ್ ಅವರ ಪತ್ನಿ ಎಂಬುವುದನ್ನು ತೋರಿಸುತ್ತೇನೆ. ಇಷ್ಟು ವರ್ಷ ಅವರಿಗೆ ನೀಡಿದ ಪ್ರೀತಿಯನ್ನು ನೀವು ಬಿಟ್ಟುಕೊಟ್ಟಿಲ್ಲ. ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ನನ್ನ ಮೇಲೆ ಭರವಸೆ ಇಡಿ, ಅಂಬರೀಶ್ ಎಂದು ನಿಮಗೆ ಮೋಸ ಮಾಡಿಲ್ಲ. ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರನ್ನು ಸಮಾನರಾಗಿ ಕಾಣುತ್ತಿದ್ದರು. ನಾನು ಆದೇ ದಾರಿಯಲ್ಲಿ ನಡೆಯುತ್ತೇನೆ ಎಂದರು.

ಮಂಡ್ಯ ಸ್ವಾಭಿಮಾನ ಉಳಿಸುತ್ತೇವೆ. ಅಂಬರೀಶ್​ ಅಭಿಮಾನವನ್ನು ಉಳಿಸುತ್ತೇವೆ ಅಂತಾ ನನಗೆ ಭಿಕ್ಷೆ ಕೊಡಿ ಅಂತಾ ಸುಮಲತಾ ಅಂಬರೀಶ್​ ಎದುರಿಗಿದ್ದ ಜನರನ್ನು ಸೆರಗೊಡ್ಡಿ ಬೇಡಿದ್ರು. ಇದೇ ವೇಳೆ, ನಿಮ್ಮನ್ನು ನಂಬಿ ಬಂದಿದ್ದೇನೆ ನನ್ನನ್ನು ಕೈ ಬಿಡಬೇಡಿ ಅಂತಾ ಮನವಿ ಮಾಡಿದ್ರು.

- Advertisement -
- Advertisement -

Latest article