ಲೋಕಸಭೆ ಚುನಾವಣೆ ಪ್ರಚಾರ ಸಭೆಗಳಲ್ಲಿ ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಲೇ ಇದ್ದಾರೆ. ಮೋದಿ ಅವರು ಮಮತಾ ಅವರನ್ನು ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವ ಸ್ಪೀಡ್ ಬ್ರೇಕರ್ ದೀದಿ ಎಂದು ಕರೆದರೆ, ಮಮತಾ ಬ್ಯಾನರ್ಜಿ ಮೋದಿ ಅವರನ್ನು ಎಕ್ಸ್ಪೈರಿ ಬಾಬು ಎಂದು ಟೀಕಿಸುತ್ತಿದ್ದಾರೆ.
ಆದರೆ ರಾಜಕೀಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬದ್ಧ ವೈರಿ ಎಂದೇ ಗುರುತಿಸಿಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕುರಿತು ಮೋದಿ ಅವರು ಅಚ್ಚರಿಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಪ್ರತಿ ವರ್ಷ ತಮಗೆ ಬೇಕಾದ ಕುರ್ತಾಗಳನ್ನು ಮಮತಾ ದೀದಿ ಸ್ವತಃ ಆಯ್ಕೆ ಮಾಡಿ, ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ.
ಕುರ್ತಾಗಳನ್ನು ಮಾತ್ರವಲ್ಲ, ಪಶ್ಚಿಮ ಬಂಗಾಳದ ಅತ್ಯಂತ ಜನಪ್ರಿಯವಾದ ಸಿಹಿ ಖಾದ್ಯಗಳನ್ನು ಕೂಡ ಮಮತಾ ದೀದಿ ತಮಗೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮೋದಿ ಹಲವು ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಂಡಿದ್ದು, ದೀದಿಯ ಕೊಡುಗೆಯನ್ನು ಕೂಡಾ ಸ್ಮರಿಸಿದ್ದಾರೆ.
Discussion about this post