ಚರಂಡಿಗಳ ಹೂಳು ತೆಗೆಯದೇ BBMP ಅಧಿಕಾರಿಗಳ ನಿರ್ಲಕ್ಷ್ಯ
ಭಾನುವಾರ ಮಧ್ಯರಾತ್ರಿ ಸುರಿದ ಮಳೆಗೆ ಬೆಂಗಳೂರಿನ ಅನೇಕ ರಸ್ತೆಗಳು ಜಲಾವೃತವಾಗಿತ್ತು. ಸಂಪ್ರದಾಯ ಅನ್ನುವಂತೆ ಚರಂಡಿ ನೀರು ರಸ್ತೆಯಲ್ಲೇ ಹರಿದು ಅವಾಂತರ ಸೃಷ್ಟಿಯಾಗಿತ್ತು. ಈ ಹಿನ್ನಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೋಮವಾರ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಚರಂಡಿಗಳಲ್ಲಿ ಹೂಳು ತುಂಬಿರೋದು ಪತ್ತೆಯಾಗಿದೆ. ಮಳೆಗಾಲ ಪ್ರಾರಂಭಕ್ಕೂ ಮುನ್ನ ಚರಂಡಿಗಳ ಹೂಳು ತೆಗೆಯುವಂತೆ ನಿರ್ದೇಶನವಿದ್ದರೂ, BBMP ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದ್ದರು. ಹೀಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಗರಂ ಆದ ಡಿಸಿಎಂ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ ತಕ್ಷಣ ಚರಂಡಿಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಈ ನಡುವೆ ಜಯದೇವ ಆಸ್ಪತ್ರೆ ಜಂಕ್ಷನ್ ಗೆ ಭೇಟಿ ನೀಡಿ ಪರಿಶೀಲಿಸುವ ಸಂದರ್ಭದಲ್ಲಿ ಚರಂಡಿಗಳು ಸುಸ್ಥಿತಿಯಲ್ಲಿದ್ದಂತೆ ಕಂಡರೂ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿತ್ತು. ಇದನ್ನು ಗಮನಿಸಿದ ಡಿಕೆ ಶಿವಕುಮಾರ್, ಚರಂಡಿ ಕಲ್ಲು ತೆಗೆಯುವಂತೆ ಸೂಚಿಸಿದರು.
ಬಿಬಿಎಂಪಿ ಸಿಬ್ಬಂದಿ ಚರಂಡಿ ಕಲ್ಲು ತೆಗೆದ್ರೆ ಒಳಗಡೆ ಹೂಳು ತುಂಬಿತ್ತು, ಅದನ್ನು ಸಿಬ್ಬಂದಿ ಹೊರಗೆ ಹಾಕಿದ್ರೆ, ಅದರಲ್ಲಿ ತೆಂಗಿನ ಚಿಪ್ಪುಗಳೇ ತುಂಬಿತ್ತು. ಇದರಿಂದ ಗರಂ ಆದ ಡಿಸಿಎಂ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಚರಂಡಿ ನಿರ್ವಹಣೆಗೆ ಗುತ್ತಿಗೆ ಪಡೆದವರಿಗೆ ಸರಿಯಾಗಿ ಕೆಲಸ ಮಾಡಿಸಿ ಎಂದು ಸೂಚಿಸಿದರು.
ಇದೇ ವೇಳೆ ಮಾತನಾಡಿದ ಅವರು ನಗರದಲ್ಲಿ ಒಣಗಿದ ಮರಗಳನ್ನು ತೆರವು ಮಾಡಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಪಟ್ಟಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಮರಗಳ ತೆರವು ಮತ್ತು ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳೋ ಎಚ್ಚರಿಕೆಯನ್ನು ಡಿಸಿಎಂ ಇದೇ ವೇಳೆ ನೀಡಿದ್ದಾರೆ.