ನವದೆಹಲಿ : ಮನಸೋ ಇಚ್ಛೆ ಜನಪ್ರತಿನಿಧಿಗಳ ಕೇಸ್ ಹಿಂಪಡೆಯುತ್ತಿದ್ದ ರಾಜ್ಯ ಸರ್ಕಾರಗಳ ಆಟಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ಹಾಲಿ ಇರಲಿ ಮಾಜಿಯಾಗಿರಲಿ ಜನಪ್ರತಿನಿಧಿಗಳ ಕೇಸ್ ಗಳನ್ನು ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಹಿಂಪಡೆಯುವಂತಿಲ್ಲ ಎಂದು ರಾಜ್ಯ ಸರ್ಕಾರಗಳಿಗೆ ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಸಂಸದರು/ಶಾಸಕರ ವಿರುದ್ಧ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ. ಈ ಆದೇಶದಿಂದ ಇನ್ಮುಂದೆ ಜನಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸರ್ಕಾರಗಳು ಹಿಂಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ಹಿಂಪಡೆಯಬೇಕಾದರೆ ಆಯಾ ರಾಜ್ಯದ ಹೈಕೋರ್ಟ್ ಅನುಮೋದನೆ ಬೇಕಾಗುತ್ತದೆ.
ಇದೇ ಅರ್ಜಿ ವಿಚಾರಣೆಯನ್ನು ಹಿಂದೆ ನಡೆಸಿದ್ದ ನ್ಯಾಯಾಲಯ, ಜನಪ್ರತಿನಿಧಿಗಳ ವಿರುದ್ಧ ಬಾರಿ ಇರುವ ಎಲ್ಲಾ ಪ್ರಕರಣಗಳ ವಿವರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೇಳಿತ್ತು. ಈ ಹಿಂದೆ, ಕಳೆದ ವರ್ಷ ಅಕ್ಟೋಬರ್ನಲ್ಲಿ ಈ ಪ್ರಕರಣದ ವಿಚಾರಣೆ ನಡೆದಿತ್ತು. ಇಂದಿನ ಆದೇಶದಲ್ಲಿ ಪ್ರತಿ ರಾಜ್ಯದಲ್ಲೂ ವಿಶೇಷ ಎಂಪಿ/ಎಂಎಲ್ಎ ನ್ಯಾಯಾಲಯಗಳನ್ನು ಸ್ಥಾಪಿಸಲು ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಒಟ್ಟಿನಲ್ಲಿ ಸುಪ್ರೀಂಕೋರ್ಟ್ ತೀರ್ಮಾನದಿಂದ ದೇಶದ ಹಲವು ರಾಜಕಾರಣಿಗಳಿಗೆ ಸಂಕಷ್ಟ ಕಾದಿದೆ. ನಾವು ಜನಪ್ರತಿನಿಧಿಗಳು ಅದ್ಯಾವ ಸಮಾಜ ದ್ರೋಹಿ ಚಟುವಟಿಕೆ ಮಾಡಿದರೂ ನಡೆಯುತ್ತದೆ ಅನ್ನುವ ಗೂಂಡಾಗಿರಿ ವರ್ತನೆಗೆ ಇದರಿಂದ ಬ್ರೇಕ್ ಬೀಳಲಿದೆ.
Discussion about this post