ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ನಿಧಾನವಾಗಿ ಏರಲಾರಂಭಿಸಿದೆ. ಸೋಂಕಿನ ಲಕ್ಷಣಗಳು ಸೌಮ್ಯವಾಗಿರುವ ಕಾರಣ ಜನ ಕೂಡಾ ಈ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ. ಆದರೆ ಇದೇ ನಿರ್ಲಕ್ಷ್ಯ ಮುಂದುವರಿದರೆ ಮತ್ತೊಂದು ಅನಾಹುತ ಸಂಭವಿಸಿದರೂ ಅಚ್ಚರಿ ಇಲ್ಲ.
ಈ ನಡುವೆ ಅಕ್ಟೋಬರ್ ತಿಂಗಳಲ್ಲಿ ಕೊರೋನಾ ಸೋಂಕಿನ ನಾಲ್ಕನೇ ಅಲೆ ಉಚ್ಚ್ರಾಯ ಸ್ಥಿತಿಗೆ ಹೋಗಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಐಐಟಿ ಕಾನ್ಪುರ ಈ ಸಂಬಂಧ ರಾಜ್ಯ ತಾಂತ್ರಿಕ ಸಲಹಾ ಸಮಿತಿಗೆ ವರದಿ ನೀಡಿದ್ದು, ಜೂನ್ 3ನೇ ವಾರದಿಂದ ಅಕ್ಟೋಬರ್ ತನಕ ಕೊರೋನಾ ಇರಲಿದೆ ಅಂದಿದೆ. ಜೊತೆಗೆ ಅಕ್ಟೋಬರ್ ನಲ್ಲಿ ಸೋಂಕು ಪೀಕ್ ಸ್ಥಿತಿಗೆ ತಲುಪಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನು ಶಾಲೆಗಳಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವರು, ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೋಂಕು ಕಂಡು ಬಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಜೊತೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸ್ಪಷ್ಟವಾದ ನಿಯಾಮಾವಳಿ ರೂಪಿಸಿ ಕಳುಹಿಸಿಕೊಡಲಾಗಿದೆ ಅಂದಿದ್ದಾರೆ.
Discussion about this post