ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಮೊದಲ ಅಲೆ ಕಾಣಿಸಿಕೊಂಡ ವೇಳೆ ಅಯ್ಯೋ ಒಂದ್ಸಲ ಮಹಾಮಾರಿ ಹೋದರೆ ಸಾಕು ಅಂದುಕೊಂಡಿದ್ದೆವು. ಎರಡನೇ ಅಲೆ ಕಾಣಿಸಿಕೊಂಡ ವೇಳೆ ಮೊದಲ ಅಲೆಯೇ ಬೆಟರ್ ಅನ್ನಿಸುವಂತಾಗಿದೆ.
ವಿವಿಧ ರಾಜ್ಯ ಸರ್ಕಾರ ಕೊರೋನಾ ಸೋಂಕಿನ ಎರಡನೆ ಅಲೆಯನ್ನು ಎದುರಿಸಲು ವಿಫಲವಾದ ಹಿನ್ನಲೆಯಲ್ಲಿ ಜನ ಸಂಕಷ್ಟ ಪಡುವಂತಾಗಿದೆ. ಈ ನಡುವೆ ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ದೇಶದಲ್ಲಿ ಆಕ್ಸಿಜನ್ ಕೊರತೆಯಿಂದಲೇ ಹೆಚ್ಚಿನ ಸಾವುಗಳು ಸಂಭವಿಸುತ್ತಿದೆ.
ಈ ನಡುವೆ ದೇಶದ ಆಕ್ಸಿಜನ್ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನಿಲ್ಲದ ಸರ್ಕಸ್ ನಡೆಸುತ್ತಿದೆ. ಇದೀಗ ಭಾರತೀಯ ರೈಲ್ವೆ ಹಾಗೂ ಭಾರತೀಯ ಸೇನೆ ಕೂಡಾ ಆಕ್ಸಿಜನ್ ಪೂರೈಕೆ ಕೆಲಸಕ್ಕೆ ಕೈ ಜೋಡಿಸಿದೆ.
ಈ ನಿಟ್ಟಿನಲ್ಲಿ ಗುರುವಾರ ತಡರಾತ್ರಿ ವಿಶಾಖಪಟ್ಟಣದಿಂದ ಹೊರಟ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಶುಕ್ರವಾರ ಸಂಜೆ ಮಹಾರಾಷ್ಟ್ರದ ನಾಗಪುರವನ್ನು ತಲುಪಿದೆ. ಇಲ್ಲಿ ಮೂರು ಟ್ಯಾಂಕರ್ ಆಕ್ಸಿಜನ್ ಇಳಿಯಲಿದ್ದು, ಇನ್ನುಳಿದ ನಾಲ್ಕು ಟ್ಯಾಂಕರ್ ಹೊತ್ತ ಆಕ್ಸಿಜನ್ ಎಕ್ಸ್ ಪ್ರೆಸ್ ಮುಂಬೈಗೆ ತೆರಳಲಿದೆ.
ಆಕ್ಸಿಜನ್ ಟ್ಯಾಂಕರ್ ಗಳನ್ನು ಸಾಗಿಸುವ ಸೌಕರ್ಯದ ಮೆಚ್ಚವನ್ನು ಭಾರತೀಯ ಸೇನೆ ಭರಿಸಲಿದ್ದು, ರೈಲ್ವೆ ಇಲಾಖೆ ನಿರ್ವಹಣೆಯ ಹೊಣೆ ಹೊತ್ತಿದೆ.. ಪ್ರತಿಯೊಂದು ಟ್ಯಾಂಕರ್ 15 ಟನ್ ಸಾಮರ್ಥ್ಯವನ್ನು ಹೊಂದಿದೆ.
Discussion about this post