ಮಂಡ್ಯ : ರಾಜ್ಯ ರಾಜಧಾನಿಯಲ್ಲಿ ಅಬ್ಬರಿಸುತ್ತಿದ್ದ ಕೊರೋನಾ ಇದೀಗ ಹಳ್ಳಿಗಳಲ್ಲಿ ರುದ್ರನರ್ತನಗೈಯುತ್ತಿದೆ. ಮೊದಲ ಅಲೆಯಲ್ಲಿ ನೆಮ್ಮದಿಯಾಗಿದ್ದ ಹಳ್ಳಿಗಳು ಇದೀಗ ಆತಂಕದಲ್ಲಿದೆ. ರಾಜ್ಯದ ನೂರಾರು ಹಳ್ಳಿಗಳ ಪ್ರತೀ ಮನೆಯಲ್ಲೂ ಸೋಂಕಿತರು ಕಾಣಿಸಿಕೊಳ್ಳುತ್ತಿರುವುದು ಭೀತಿ ಹುಟ್ಟಿಸಿದೆ.
ಈ ನಡುವೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ ಈವರೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಸೋಂಕು ಹರಡದಂತೆ ಊರ ಒಲಗೆ ಯಾರು ಬಾರದಂತೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದ ಕಾರಣ ಕೊರೋನಾ ಸೋಂಕು ಹಳ್ಳಿಗೆ ಕಾಲಿಟ್ಟಿರಲಿಲ್ಲ. ಅಷ್ಟು ಮಾತ್ರವಲ್ಲದೆ ಗ್ರಾಮದಿಂದ ಯಾರೊಬ್ಬರೂ ಹೊರ ಹೋಗದಂತೆ ನಿರ್ಬಂಧ ಕೂಡಾ ಇಲ್ಲಿ ಜಾರಿಯಲ್ಲಿದೆ.
ಆದರೆ ಇದೀಗ ಕೊರೋನಾ ಸೋಂಕಿನಿಂದ ಮುಕ್ತವಾಗಿದ್ದ ಮುತ್ತತ್ತಿಯಲ್ಲಿ ನಾಲ್ವರಿಗೆ ಸೋಂಕು ಕಾಣಿಸಿಕೊಂಡಿದೆ. ಅದು ಕೂಡಾ ಗ್ರಾಮಸ್ಥರ ಪಾಲಿನ ಮುತ್ತತ್ತಿರಾಯ ಖ್ಯಾತಿಯ ಆಂಜನೇಯ ದೇವಸ್ಥಾನದ ಆರ್ಚಕರ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿದೆ. ಅರ್ಚಕರ ಮನೆಯ ನಾಲ್ವರಲ್ಲಿ ಸೋಂಕು ಪತ್ತೆಯಾಗಿರುವ ಸುದ್ದಿ ಇಡೀ ಗ್ರಾಮಕ್ಕೆ ಬರಸಿಡಿಲು ಬಡಿದಂತಾಗಿದೆ.
ಗ್ರಾಮದಿಂದ ಯಾರೊಬ್ಬರೂ ಹೊರಗೆ ಹೋಗೋ ಹಾಗಿಲ್ಲ. ಗ್ರಾಮಕ್ಕೆ ಯಾರು ಬರೋ ಹಾಗಿಲ್ಲ ಹಾಗಿದ್ದರೂ ಕೊರೋನಾ ಸೋಂಕು ಬಂದಿದ್ದು ಹೇಗೆ ಅನ್ನುವ ಪ್ರಶ್ನೆ ಎದ್ದಿದೆ. ಮೂಲಗಳ ಪ್ರಕಾರ ಮುತ್ತತ್ತಿ ಕೊರೋನಾ ಸೋಂಕು ಮುಕ್ತ, ಮುತ್ತತ್ತಿಯನ್ನು ಮುಟ್ಟದ ಚೈನಾ ವೈರಸ್ ಎಂದು ವರದಿ ಮಾಡಲು ಮಾಧ್ಯಮ ಪ್ರತಿನಿಧಿಗಳು ತೆರಳಿದ್ದರು, ಇವರಿಂದ ಹಳ್ಳಿಗೆ ಸೋಂಕು ಬಂದಿರಬಹುದು ಅನ್ನುವ ಸಂಶಯ ಪ್ರಾರಂಭವಾಗಿದೆ.
ಇದರೊಂದಿಗೆ ಜೆಡಿಎಸ್ ಶಾಸಕರು ತಮ್ಮ ಬೆಂಬಲಿಗರು ಹಾಗೂ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿ ಫುಡ್ ಕಿಟ್ ಗಳನ್ನು ವಿತರಿಸಿ ಬಂದಿದ್ದರು. ಇವರಿಂದ ಹಳ್ಳಿಗೆ ಸೋಂಕು ಎಂಟ್ರಿ ಕೊಡ್ತಾ ಅನ್ನುವ ಪ್ರಶ್ನೆ ಎದ್ದಿದೆ.
ಒಟ್ಟಿನಲ್ಲಿ ನೆಮ್ಮದಿಯಾಗಿದ್ದ ಗ್ರಾಮಕ್ಕೆ ಶಾಪವಾಗಿದ್ದು ಯಾರು ಅನ್ನುವ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ. ಗ್ರಾಮಕ್ಕೆ ಕೊರೋನಾ ಹಂಚಿ ಬಂದವರಿಗೆ ಶಿಕ್ಷೆಯಾಗಲೇಬೇಕಿದೆ.
ಮುತ್ತತ್ತಿ ಗ್ರಾಮ ಒಟ್ಟು 320 ಜನಸಂಖ್ಯೆಯನ್ನು ಹೊಂದಿದ್ದು, ಮುತ್ತತ್ತಿಗೆ ಬರುವ ಪ್ರವಾಸಿಗರನ್ನು ನೆಚ್ಚಿಕೊಂಡಿದ್ದ ಗಿರಿಜನರು ತಮ್ಮ ಜೀವನ ಸಾಗಿಸುತ್ತಿದ್ದರು.
Discussion about this post