ನವದೆಹಲಿ : ಕೊರೋನಾ ಸೋಂಕಿನ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸದೆ ಹೋಗಿರುತ್ತಿದ್ರೆ, ದೇಶದ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳನ್ನು ಸುಪ್ರೀಂ ಕೋರ್ಟ್ ಸರಿ ಮಾಡಿದ ಕಾರಣದಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಸುಪ್ರೀಂಕೋರ್ಟ್ ಚಾಟಿ ಬೀಸದೆ ಹೋಗಿರುತ್ತಿದ್ರೆ ಕೇಂದ್ರ ಸರ್ಕಾರ ಆನೆ ನಡೆದದ್ದೇ ಹಾದಿ ಅನ್ನುವಂತೆ ವರ್ತಿಸುತ್ತಿತ್ತು.
ಈ ನಡುವೆ ಸುಪ್ರೀಂಕೋರ್ಟ್ ಕಾರ್ಯವೈಖರಿಯನ್ನು ಮೆಚ್ಚಿರುವ ಕೇರಳದ ಬಾಲಕಿಯೊಬ್ಬಳು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾಳೆ. ಬಾಲಕಿಯ ಪತ್ರದೊಂದಿಗೆ ಚಿತ್ರವೊಂದನ್ನು ಕಳುಹಿಸಿದ್ದು ಇದು ಮುಖ್ಯ ನ್ಯಾಯಮೂರ್ತಿಗಳ ಮನ ತಟ್ಟಿದ್ದು, ಅದಕ್ಕೆ ಮರು ಓಲೆಯನ್ನು ಕೂಡಾ ಬರೆದಿದ್ದಾರೆ.
ಬಾಲಕಿಯ ಪತ್ರದಲ್ಲಿ ಏನಿದೆ..?
ನಾನು ಲಿಂಡ್ವಿನಾ ಜೋಸೆಫ್, ತ್ರಿಶೂರ್ ಕೇಂದ್ರಿಯ ವಿದ್ಯಾಲಯದಲ್ಲಿ 5ನೇ ತರಗತಿ ಓದುತ್ತಿದ್ದೇನೆ. ದಿ ಹಿಂದೂ ಪತ್ರಿಕೆಯಲ್ಲಿ ಬರುವ ಸುದ್ದಿಗಳನ್ನು ನಾನು ಓದುತ್ತಿದ್ದೇನೆ. ದೆಹಲಿ ಹಾಗೂ ದೇಶದ ಇತರ ಭಾಗಗಳಲ್ಲಿ ಕೊರೋನಾದಿಂದ ಸಂಭವಿಸುತ್ತಿದ್ದ ಮರಣದ ಸುದ್ದಿ ಕೇಳಿ ಬೇಸರವಾಗುತ್ತಿತ್ತು. ಈ ವೇಳೆ ನ್ಯಾಯಾಲಯ ಮಧ್ಯಪ್ರವೇಶಿಸಿ ಸಾವು ಮತ್ತು ನೋವು ತಗ್ಗಿಸಲು ನೆರವಾದ ವಿಚಾರ ತಿಳಿದು ಸಂತೋಷವಾಯ್ತು. ಆಕ್ಸಿಜನ್ ಕುರಿತಂತೆ ನೀವು ಕೊಟ್ಟ ತೀರ್ಪುಗಳು ಅನೇಕ ಜೀವಗಳನ್ನು ಉಳಿಸಿತು. ಹೀಗಾಗಿ ನ್ಯಾಯಾಲಯದ ಬಗ್ಗೆ ಅತೀವ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದು ಬಾಲಕಿ ಹೇಳಿದ್ದಾಳೆ. ಇದೇ ಪತ್ರದೊಂದಿಗೆ ರಾಷ್ಟ್ರಧ್ವಜ, ರಾಷ್ಟ್ರ ಲಾಂಛನ ಮತ್ತು ಮಹಾತ್ಮಾಗಾಂಧಿ ಅವರ ಚಿತ್ರದೊಂದಿಗೆ ನ್ಯಾಯಾಧೀಶರೊಬ್ಬರು ಕೊರೋನಾ ವೈರಾಣುವಿನ ಮರದ ಸುತ್ತಿಗೆಯಿಂದ ಹೊಡೆಯುತ್ತಿರುವ ದೃಶ್ಯವಿರುವ ಚಿತ್ರವೊಂದನ್ನು ಪತ್ರದ ಜೊತೆಗೆ ಇರಿಸಿದ್ದಳು.
ಇನ್ನು ಬಾಲಕಿಯ ಪತ್ರಕ್ಕೆ ಉತ್ತರಿಸಿರುವ ಮುಖ್ಯ ನ್ಯಾಯಮೂರ್ತಿ ರಮಣ ಅವರು, ಪ್ರೀತಿಯ ಲಿಡ್ವಿನಾ, ನಿನ್ನ ಸುಂದರ ಪತ್ರ ಹಾಗೂ ಸುಂದರ ಚಿತ್ರ ನನಗೆ ತಲುಪಿದೆ. ದೇಶದ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದೀಯಾ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ತೋರಿಸಿದ ಕಾಳಜಿ ನನಗೆ ಇಷ್ಟವಾಗಿದೆ. ದೇಶದ ಪ್ರಜ್ಞಾವಂತ ಪ್ರಜೆಯಾಗಿ ದೇಶ ಕಟ್ಟಲು ಕೊಡುಗೆ ನೀಡುತ್ತಿ ಅನ್ನುವ ಭರವಸೆ ನನಗಿದೆ ಅಂದಿದ್ದಾರೆ.
Discussion about this post