ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಕ್ಷೇತ್ರ ತ್ಯಾಗ ಮಾಡಿದ್ದ ಡಿ.ಬಿ.ಚಂದ್ರೇಗೌಡ ( D. B. Chandregowda )
ಮಾಜಿ ಸಚಿವ, ಬಿಜೆಪಿ ನಾಯಕ ಡಿ.ಬಿ.ಚಂದ್ರೇಗೌಡ (DB Chandregowda) ಸೋಮವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ಬಿ.ಚಂದ್ರೇಗೌಡರು ಸೋಮವಾರ ಮಧ್ಯರಾತ್ರಿ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 2 ರಿಂದ ಸಂಜೆ 6ರವರೆಗೆ ಸಾರ್ವಜನಿಕರ ಅಂತಿಮ ದರ್ಶನ ಪಡೆಯಬಹುದಾಗಿದೆ. ನಾಳೆ (ನವೆಂಬರ್ 08 ಬುಧವಾರ ) ದಾರದಹಳ್ಳ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಇದನ್ನೂ ಓದಿ : ಇಸ್ರೋ ಅಧ್ಯಕ್ಷರ ಆತ್ಮಚರಿತ್ರೆಗೆ ಕೇಂದ್ರ ಸರ್ಕಾರದಿಂದ ತಡೆ
ಡಿಬಿಎಸ್ ಎಂದೇ ಹೆಸರಾಗಿರುವ ಚಂದ್ರೇಗೌಡರು, ಭೈರೇಗೌಡ ಮತ್ತು ಪುಟ್ಟಮ್ಮ ಅವರ ಪುತ್ರರಾಗಿ 1936ರ ಆಗಸ್ಟ್ 26ರಂದು ಜನಿಸಿದ್ದರು. ಕಾನೂನು ಪದವಿ ಪಡೆದು ವಕೀಲರಾಗಿದ್ದ ಚಂದ್ರೇಗೌಡರು, 1971ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ರಂಗ ಪ್ರವೇಶಿಸಿದರು. 1971ರಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರು.
1977ರಲ್ಲಿ ಎರಡನೇ ಬಾರಿಗೆ ಸಂಸತ್ ಸದಸ್ಯರಾಗಿದ್ದ ಚಂದ್ರೇಗೌಡರು 1978ರಲ್ಲಿ ಇಂದಿರಗಾಂಧಿ ಅವರಿಗೆ ಸ್ಪರ್ಧಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾತ್ರವಲ್ಲದೆ ಇಂದಿರಾಗಾಂಧಿ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದರು ಮತ್ತು ಆ ಕಾರಣಕ್ಕಾಗಿ ದೇಶದೆಲ್ಲೆಡೆ ಸುದ್ದಿಯಾಗಿದ್ದರು ಕೂಡಾ.
- 1971 : ಚಿಕ್ಕಮಗಳೂರು ಕ್ಷೇತ್ರದಿಂದ ಸಂಸತ್ ಪ್ರವೇಶ
- 1977 : ಎರಡನೇ ಬಾರಿಗೆ ಸಂಸದರಾಗಿ ಆಯ್ಕೆ
- 1978 : ಇಂದಿರಾಗಾಂಧಿಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ
- 1979–80 : ವಿಧಾನಪರಿಷತ್ ಸದಸ್ಯ ಹಾಗೂ ನೀರಾವರಿ ಸಚಿವ
- 1980–81 : ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕ
- 1983 : ತೀರ್ಥಹಳ್ಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
- 1983-85 : ವಿಧಾನಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಣೆ
- 1986 : ರಾಜ್ಯಸಭಾ ಸದಸ್ಯರಾಗಿ ಆಯ್ಕೆ
- 1987 : ತೀರ್ಥಹಳ್ಳಿ ಕ್ಷೇತ್ರದಿಂದ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ
- 1999 : ಶೃಂಗೇರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
- 1999 – 2004 : ಕಾನೂನು ಸಚಿವರಾಗಿ ಕಾರ್ಯನಿರ್ವಹಣೆ
- 2009 : ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ
- 2014 : ಸಕ್ರಿಯ ರಾಜಕೀಯದಿಂದ ನಿವೃತ್ತಿ
ಆದಾದ ನಂತರ ವಿಧಾನ ಪರಿಷತ್ ಸದಸ್ಯರಾದ ಚಂದ್ರೇಗೌಡರು, ದೇವರಾಜು ಅರಸು ಅವರ ಸಂಪುಟದಲ್ಲಿ 1979ರಿಂದ 1980ರ ತನಕ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಬದಲಾದ ರಾಜಕೀಯ ಪರಿಸ್ತಿತಿಯಲ್ಲಿ ದೇವರಾಜು ಅವರೊಂದಿಗೆ ಕ್ರಾಂತಿರಂಗದಲ್ಲಿ ಗುರುತಿಸಿಕೊಂಡ ಅವರು 1980-81ರ ಅವಧಿಗೆ ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು.
1983ರಲ್ಲಿ ಜನತಾ ಪಕ್ಷದಿಂದ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಣಕ್ಕಿಳಿದ ಅವರು ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ರಾಮಕೃಷ್ಣ ಹೆಗ್ಡೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1983 ರಿಂದ 1985ರ ತನಕ ವಿಧಾನಸಭಾ ಸ್ಪೀಕರ್ ಆಗಿಯೂ ಚಂದ್ರೇಗೌಡರು ಕಾರ್ಯನಿರ್ವಹಿಸಿದ್ದರು.
Read More : Jet airwaysನ 538 ಕೋಟಿ ರೂ ಮೊತ್ತದ ಆಸ್ತಿ ಮುಟ್ಟುಗೋಲು
1986ರಲ್ಲಿ ಜನತಾ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 1987ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
1999ರಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಚಂದ್ರೇಗೌಡರು, 1999ರಿಂದ 2004ರ ತನಕ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2009ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಚಂದ್ರೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಭವನ ಪ್ರವೇಶಿಸಿದ್ದರು.
2014ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಸರಿದ ಸಮಾಜವಾದಿ ಚಿಂತಕ ಚಂದ್ರೇಗೌಡರು ದಾರದಹಳ್ಳಿಯ ಪೂರ್ಣಚಂದ್ರ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

Discussion about this post