ಬೆಂಗಳೂರು : ಕೊರೋನಾ ಸೋಂಕಿನ ಎರಡನೇ ಅಲೆಯ ಅಬ್ಬರದ ಸಂದರ್ಭದಲ್ಲಿ ಕೊರೋನಾ ಸೋಂಕಿತ ವೃದ್ಧೆಯೊಬ್ಬರ ಚಿನ್ನದ ಸರ ಎಗರಿಸಿದ್ದ ಆರೋಪಿಯನ್ನು ಪೊಲೀಸರು ಎಂಟು ತಿಂಗಳ ಬಳಿಕ ಬಂಧಿಸಿದ್ದಾರೆ. ಬಂಧಿತನನ್ನು ಜಾಲಹಳ್ಳಿ ಕ್ರಾಸ್ ನಿವಾಸಿ ಇಮ್ತಿಯಾಜ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 70 ಗ್ರಾಮ್ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಚಿತ್ರದುರ್ಗ ಹಿರಿಯೂರು ಮೂಲದ ಇಮ್ತಿಯಾಜ್ ಬ್ಯಾಡರಹಳ್ಳಿ ಸಮೀಪದ ಕೆಂಪೇಗೌಡ ನಗರದ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಎಪ್ರಿಲ್ 23 ರಂದು ವೃದ್ಧೆಯೊಬ್ಬರು ಕೊರೋನಾ ಚಿಕಿತ್ಸೆಗೆ ದಾಖಲಾಗಿದ್ದರು. ವೃದ್ಧೆ ದಾಖಲಾದ ಮರು ದಿನ ತಾಯಿಯ ಆರೋಗ್ಯ ವಿಚಾರಿಸಲು ಅವರ ಪುತ್ರ ಬಂದಾಗ ಚಿನ್ನದರ ಸರ ನಾಪತ್ತೆಯಾಗಿರುವುದು ಗೊತ್ತಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ವೃದ್ಧೆ ಯಾರೋ ಕಳುವು ಮಾಡಿರಬೇಕು ಅಂದಿದ್ದರು. ಈ ಸಂಬಂಧ ಏಪ್ರಿಲ್ 25 ರಂದು ಬ್ಯಾಡರಹಳ್ಳಿ ಠಾಣೆಯಲ್ಲಿ ಅವರ ಪುತ್ರ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆ ಮಾಲೀಕರು ಸೇರಿದಂತೆ ಸಿಬ್ಬಂದಿಗೂ ನೊಟೀಸ್ ಕೊಟ್ಟು ವಿಚಾರಣೆ ಪ್ರಾರಂಭಿಸಿದರು. ಇದೇ ವೇಳೆ ಆಸ್ಪತ್ರೆ ಮಾಲೀಕರು ಕೊರೋನಾ ಸೋಂಕಿಗೆ ತುತ್ತಾದರು. ಆಸ್ಪತ್ರೆ ನಡೆಸಲಾಗದ ಕಾರಣ ಆಸ್ಪತ್ರೆಯನ್ನೇ ಮುಚ್ಚಲಾಯ್ತು. ಹೀಗಾಗಿ ಸಿಬ್ಬಂದಿ ಬೇರೆ ಬೇರೆ ಚದುರಿ ಹೋದರು. ತನಿಖೆಯ ಕಡತವೂ ಮೌನವಾಯ್ತು.
ಈ ನಡುವೆ ಕೆಲ ತಿಂಗಳ ಹಿಂದೆ ಆಸ್ಪತ್ರೆಯನ್ನು ಬೇರೆಯವರಿಗೆ ಮಾರಾಟ ಮಾಡಲಾಗಿತ್ತು. ಹೀಗಾಗಿ ಮತ್ತೆ ಆಸ್ಪತ್ರೆ ಪ್ರಾರಂಭವಾದ ಕಾರಣ ಬಹುತೇಕ ಹಳೆಯ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದರು. ಇದರಲ್ಲಿ ಇಮ್ತಿಯಾಜ್ ಕೂಡಾ ಸೇರಿದ್ದ. ಆಸ್ಪತ್ರೆ ಕಾರ್ಯಾಪ್ರಾರಂಭಿಸುತ್ತಿದ್ದಂತೆ ಕಳ್ಳತನ ಕಡತಕ್ಕೂ ಜೀವ ಬಂತು. ಮತ್ತೆ ವಿಚಾರಣೆ ಪ್ರಾರಂಭವಾದ ವೇಳೆ ಇಮ್ತಿಯಾಜ್ ನಡೆ ಅನುಮಾನ ಹುಟ್ಟಿಸಿತು. ಹೀಗಾಗಿ ವಿಚಾರಣೆ ತೀವ್ರಗೊಳಿಸಿದಾಗ ಚಿನ್ನದ ಸರದ ರಹಸ್ಯ ಬಯಲಾಗಿತ್ತು.
ಇಮ್ತಿಯಾಜ್ ಹೇಳಿಕೆ ಪ್ರಕಾರ ಆತ ಸರವನ್ನು ಕಳ್ಳತನ ಮಾಡಿಲ್ಲ. ಬದಲಾಗಿ ಲಿಫ್ಟ್ ನಲ್ಲಿ ಬಿದ್ದು ಸಿಕ್ಕ ಸರವನ್ನು ಮನೆಗೆ ತೆಗೆದುಕೊಂಡು ಹೋಗಿ ಅಡಮಾನವಿಟ್ಟು ಸಾಲ ಪಡೆದಿದ್ದನಂತೆ.
Discussion about this post