ಕಾರವಾರ : ಉತ್ತರ ಕನ್ನಡ ಜಿಲ್ಲೆಯ ರಾಜಕೀಯದಲ್ಲಿ ಸಂಸದ ಅನಂತ ಕುಮಾರ ಹೆಗಡೆ ಮತ್ತು ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಬದ್ಧ ವೈರಿಗಳಾಗಿ ಗುರುತಿಸಿಕೊಂಡವರು. ಅದರಲ್ಲೂ ಇತ್ತೀಚೆಗೆ ಹೆಗಡೆ ವಿರುದ್ಧ ಅಸ್ನೋಟಿಕರ್ ಬಳಸಬಾರದ ಶಬ್ಧಗಳನ್ನು ಬಳಸಿ ಟೀಕೆಗೂ ಒಳಗಾಗಿದ್ದರು. ಈ ನಡುವೆ ಆನಂದ್ ಅಸ್ನೋಟಿಕರ್ ಮನೆಗೆ ಭೇಟಿ ನೀಡಿದ ಅನಂತ ಕುಮಾರ್ ಹೆಗಡೆ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ದಶಕಗಳ ವೈರತ್ವ ಮರೆತು ಅನಂತ ಕುಮಾರ್ ಹೆಗಡೆ ಮತ್ತು ಅನಂದ್ ಅಸ್ನೋಟಿಕರ್ ಭೇಟಿಯಾಗಿದ್ದಾರೆ.
ಕಾರವಾರ ತಾಲೂಕಿನ ಫಾದ್ರಿಭಾಗ್ ನಲ್ಲಿರುವ ಅಸ್ನೋಟಿಕರ್ ನಿವಾಸಕ್ಕೆ ಬಿಜೆಪಿ ಶಾಸಕರೊಂದಿಗೆ ಭೇಟಿ ನೀಡಿದ ಸಂಸದರು, ಅನಂದ್ ಅಸ್ನೋಟಿಕರ್ ತಾಯಿ, ವಸಂತ್ ಅಸ್ನೋಟಿಕರ್ ಪತ್ನಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್ ಆರೋಗ್ಯ ವಿಚಾರಿಸಿದರು.
ಇತ್ತೀಚಿಗೆ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶುಭಲತಾ ಅಸ್ನೋಟಿಕರ್ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಶುಭಲತಾ ಅವರ ಆರೋಗ್ಯ ವಿಚಾರಿಸುವ ಹಿನ್ನಲೆಯಲ್ಲಿ ಹೆಗಡೆ ಭೇಟಿ ನೀಡಿದ್ದು, ಮನೆಗೆ ಬಂದ ಅಪರೂಪದ ಅತಿಥಿಯನ್ನು ಬಾಗಿಲಲ್ಲೇ ನಿಂತು ಆನಂದ್ ಅಸ್ನೋಟಿಕರ್ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ : ಅನಂತ ಕುಮಾರ್ ಹೆಗಡೆ ಸತ್ತರೇನು..? ಉಳಿದರೇನು… ನಾಲಗೆ ಹರಿಬಿಟ್ಟ ಮಾಜಿ ಸಚಿವ
ಈ ವೇಳೆ ತಾಯಿಗೆ ನಡೆಯುತ್ತಿರುವ ಚಿಕಿತ್ಸೆ ಕುರಿತಂತೆ ಸಂಸದರೊಂದಿಗೆ ಆನಂದ್ ಅಸ್ನೋಟಿಕರ್ ಮಾಹಿತಿ ಹಂಚಿಕೊಂಡರು. ಬಳಿಕ ದಿ. ವಸಂತ ಅಸ್ನೋಟಿಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಹೆಗಡೆ ತೆರಳಿದರು. ಮಾಧ್ಯಮಗಳ ಯಾವುದೇ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.
ಈ ನಡುವೆ ಹೆಗಡೆ ಭೇಟಿ ಕುರಿತಂತೆ ಮಾತನಾಡಿರುವ ಅಸ್ನೋಟಿಕರ್, ರಾಜಕೀಯವಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದೆ. ಅವರು ನಮ್ಮ ಸಂಸದರಾಗಿರುವುದರಿಂದ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಿಸುತ್ತೇನೆ. ಈಗ್ಲೂ ನಾನು ಅವರನ್ನು ಅಣ್ಣ ಅಂತಾನೇ ಕರೆಯೋದು. ಇದೊಂದು ಸೌಜನ್ಯದ ಭೇಟಿಯಾಗಿದ್ದು ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ. ಈ ಹಿಂದೆ ಅಮ್ಮ ಅನಂತಕುಮಾರ್ ಹೆಗಡೆ ಪರವಾಗಿ ಪ್ರಚಾರ ಕೈಗೊಂಡಿದ್ದರು. ಅವರ ಬಗ್ಗೆ ಅಮ್ಮನಿಗೆ ಒಳ್ಳೆಯ ಅಭಿಪ್ರಾಯವಿದೆ. ಅಮ್ಮ ಸದಾ ಅನಂತಕುಮಾರ್ ಅವರಿಗೆ ಬೆಂಬಲಿಸುತ್ತಾರೆ. ಅವರಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಭೇಟಿ ಮಾಡಿದ್ದಾರೆ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
Discussion about this post