ಬೆಂಗಳೂರು : ಅನಾಥ ಕರುವೊಂದನ್ನು ಠಾಣೆಯಲ್ಲಿ ಸಾಕಿ ಸುದ್ದಿಯಾಗಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಮಹಮ್ಮದ್ ರಫೀದ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ಸ್ನಾನಕ್ಕೆ ತೆರಳಿದ ವೇಳೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಕುಟುಂಬ ಸದಸ್ಯರು ವೈದ್ಯರನ್ನು ಕರೆ ತಂದಿದ್ದರು. ಅಶ್ಟು ಹೊತ್ತಿಗೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರಫೀಕ್ ಸಾವಿಗೆ ಇದೀಗ ಕೇವಲ ಖಾಕಿ ಬಳಗ ಮಾತ್ರವಲ್ಲದೆ ಪ್ರಜ್ಞಾವಂತ ಕನ್ನಡಿಗರು ಕಂಬನಿ ಮಿಡಿದಿದ್ದಾರೆ.
ಈ ಹಿಂದೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಕರುವೊಂದನ್ನು ರಕ್ಷಿಸಿ ಠಾಣೆಯಲ್ಲೇ ಆರೈಕೆ ಮಾಡಿ ಸುದ್ದಿಯಾಗಿದ್ದರು. ಜೊತೆಗೆ ಭೀಮ ಎಂದು ನಾಮಕರಣ ಕೂಡಾ ಮಾಡಿದ್ದರು. ಇದಾದ ಬಳಿಕ ತಾವು ವರ್ಗಾವಣೆಗೊಂಡ ಠಾಣೆಗಳಿಗೆ ಈ ಕರುವನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು.

ಇನ್ನು ಈ ಮಹಮ್ಮದ್ ರಫೀಕ್, ಪೊಲೀಸ್ ಅಂದ್ರೆ ಜನ ಸಾಮಾನ್ಯರಲ್ಲಿ ಇರುವ ಭಾವನೆಗೆ ಅಪವಾದ ಅನ್ನುವಂತೆ ಇದ್ದರು. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ವೇತನದ ಒಂದು ಭಾಗವವನ್ನು ಗೋವುಗಳ ಆಹಾರಕ್ಕೆ ವೆಚ್ಚ ಮಾಡಿದ್ದ ಇವರು, ಕಷ್ಟ ಎಂದು ಠಾಣೆಗೆ ಬಂದವರ ವಿರುದ್ಧ ದನಿ ಏರಿಸಿದವರಲ್ಲ. ತನ್ನ ಕೊಠಡಿಯಲ್ಲಿ ಕೂರಿಸಿ ಸಮಸ್ಯೆ ಆಲಿಸುತ್ತಿದ್ದರು. ಅದರಲ್ಲೂ ಕೌಟುಂಬಿಕ ಸಮಸ್ಯೆಗಳನ್ನು ಕೇಸ್ ಇಲ್ಲದೆ ಸಾಂತ್ವಾನ, ಬುದ್ದಿ ಮಾತುಗಳ ಮೂಲಕ ಪರಿಹರಿಸುತ್ತಿದ್ದರು. ಇವರೊಬ್ಬ ಪೊಲೀಸ್ ಅಧಿಕಾರಿ ಅನ್ನುವುದಕ್ಕಿಂತ ಆಪ್ತ ಸಮಾಲೋಚಕರಾಗಿದ್ದರು.

ಮೈಸೂರು ಮೂಲದ ರಫೀಕ್ PSI ಆಗಿ ಇಲಾಖೆ ಸೇರಿದ್ದರು. ಬಳಿಕ ಇನ್ಸ್ ಪೆಕ್ಟರ್ ಹುದ್ದೆಗೆ ಏರಿದ್ದ ಇವರು ನಗರದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬೈಯಪ್ಪನಹಳ್ಳಿ ಠಾಣೆಯ ಬಳಿಕ ರಾಜ್ಯ ಪೊಲೀಸ್ ಅಪರಾಧ ದಾಖಲಾತಿಗಳ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಪೊಲೀಸ್ ಕಾನ್‌ಸ್ಟೇಬಲ್ ಸುಬ್ರಮಣಿ ಅನ್ನುವ ಪ್ರತಿಭೆಗೆ ಸರಿಗಮಪದಲ್ಲಿ ಹಾಡಲು ಅವಕಾಶ ಕೊಟ್ಟಿದ್ದೂ ಕೂಡಾ ಇದೇ ರಫೀಕ್.
Discussion about this post