ವಾರಾಂತ್ಯದಲ್ಲಿ ಕಿಚ್ಚ ಸದ್ದಿಲ್ಲದೆ ಮಹಾಮನೆ ತನ್ನ ಕಳೆಯನ್ನೇ ಕಳೆದುಕೊಂಡಿದೆ. ಮಾಣಿಕ್ಯ ವೇದಿಕೆ ಹತ್ತಿ ಸ್ಪರ್ಧಿಗಳನ್ನು ಗದರಿದರೆ ಮಾತ್ರ ಬಿಗ್ ಬಾಸ್ ಕಾರ್ಯಕ್ರಮಕ್ಕೊಂದು ಶೋಭೆ. ಕೆಂಪೇಗೌಡನ ಚಪ್ಪಾಳೆ ಸಿಕ್ಕಿಲ್ಲ ಸ್ಪರ್ಧಿಗಳಿಗೂ ಹುರುಪಿಲ್ಲ. ಹೀಗಾಗಿಯೇ ಕಿಚ್ಚನ ಅನುಪಸ್ಥಿತಿಯಲ್ಲಿ ಮಹಾಮನೆಗೆ ಬಿಸಿ ಮುಟ್ಟಿಸಲು ಬಿಗ್ ಬಾಸ್ ಮುಂದಾಗಿದ್ದಾರೆ. ಈ ಬಿಸಿಯಲ್ಲಿ ಕರಗಿದ್ದು ಮಾತ್ರ ಪ್ರಶಾಂತ್ ಸಂಬರಗಿ.
ಬಿಗ್ ಬಾಸ್ ವೀಕ್ಷಿಸುತ್ತಿರುವ ಬಹುತೇಕರಿಗೆ ಸಂಬರಗಿ ಮತ್ತು ಚಂದ್ರಚೂಡ ವರ ನಡೆ ನುಡಿ ಇಷ್ಟವಾಗುತ್ತಿಲ್ಲ. ವಯಸ್ಸಿನಲ್ಲಿ ಹಿರಿಯರಾದರೂ, ಮನೆಯ ಸದಸ್ಯರೊಂದಿಗೆ ಹೇಗಿರಬೇಕು ಅನ್ನುವುದು ಅವರಿಬ್ಬರಿಗೆ ಗೊತ್ತಿಲ್ಲ. ಜೊತೆಗೆ ಅವರಿಬ್ಬರು ಬಿಗ್ ಬಾಸ್ ಮನೆಯ ಗೋಮುಖ ವ್ಯಾಘ್ರಗಳು ಅನ್ನೋದು ಈಗಾಗಲೇ ಬಯಲಾಗಿದೆ. ಚಂದ್ರಚೂಡ ಅವರಿಗಂತು ಮಾವ ಹಾಗೂ ಮಾಮ ಅನ್ನುವ ಶಬ್ಧದ ಅರ್ಥವೇ ಗೊತ್ತಿಲ್ಲ. ಇದೇ ಕಾರಣಕ್ಕೆ ಸಂಬರಗಿ ತಲೆಯನ್ನು ಸಂಬರಗಿ ಕೆಡಿಸಿದ್ದಾರೆ. ಚಂದ್ರಚೂಡ ಅವರ ಕಾರಣದಿಂದ ತಲೆ ಕೆಡಿಸಿಕೊಂಡಿರುವ ಸಂಬರಗಿ ಇದೀಗ ಸ್ತ್ರೀ ವಿರೋಧಿ ಅನ್ನುವ ಕಿರೀಟವನ್ನು ತಲೆ ಮೇಲೆ ಹೊತ್ತುಕೊಳ್ಳಬೇಕಾಗಿ ಬಂದಿದೆ.
ಎಂದಿನಂತೆ ಕಾಲರ್ ಒಬ್ಬರು ಮಹಾಮನೆಗೆ ಕರೆ ಮಾಡಿದ್ದು, ಸಂಬರಗಿ ಬಳಿ ಮಾತನಾಡಿದ್ದಾರೆ. ಈ ವೇಳೆ ಪ್ರಶಾಂತ್ ಸಂಬರಗಿ ಆಟಕ್ಕೆ ಕ್ಯಾಕರಿಸಿ ಉಗಿದಿರುವ ಅವರು ಜನ್ಮಕ್ಕೆ ಸಾಕು ಅನ್ನುವಷ್ಟು ಮಂಗಳಾರತಿ ಎತ್ತಿದ್ದಾರೆ. ಮೊಟ್ಟೆ, ಬಾಳೆ ಹಣ್ಣು, ತುಪ್ಪ, ಚಪಾತಿ ವಿಷಯಕ್ಕೆ ಮನೆಯವರ ಮುಂದೆ ತಲೆ ತಗ್ಗಿಸಬೇಕಾಗಿ ಬಂದ ಸಂಬರಗಿ ಇದೀಗ ಇಡೀ ಕರ್ನಾಟಕದ ಮುಂದೆ ತಲೆ ತಗ್ಗಿಸುವಂತಾಗಿದೆ.
ಕರೆ ಮಾಡಿದ ಕಾಲರ್ ಎತ್ತಿದ ಅದ್ಯಾವ ಪ್ರಶ್ನೆಗಳಿಗೂ ಸಂಬರಗಿ ಬಳಿ ಉತ್ತರವಿರಲಿಲ್ಲ. ನೀವು ಅದ್ಯಾಕೆ ಮಹಿಳೆಯರನ್ನೇ ಟಾರ್ಗೇಟ್ ಮಾಡ್ತೀರಾ, ನೀವ್ಯಾಕೆ ಹುಡುಗರ ಬಳಿ ಜಗಳ ಆಡೋದಿಲ್ಲ, ಸಂಸ್ಕೃತಿ, ಚರಿತ್ರೆ ಅಂತಾ ಮಾತನಾಡೋ ನೀವು ಮಾಡುತ್ತಿರುವುದೇನು ಎಂದು ಪ್ರಶ್ನೆ ಎತ್ತಿದ್ದಾರೆ. ಈ ವೇಳೆ ದಯವಿಟ್ಟು ನನಗೆ ಸ್ತ್ರೀ ವಿರೋಧಿ ಅನ್ನುವ ಪಟ್ಟವನ್ನು ಕಟ್ಟಬೇಡಿ ಎಂದು ಸಂಬರಗಿ ಮನವಿ ಮಾಡಿರುವುದು ಪ್ರೋಮೋದಲ್ಲಿ ಪ್ರಸಾರವಾಗಿದೆ. ಪೂರ್ತಿ ಎಪಿಸೋಡ್ ನೋಡಿದ್ರೆ ಮಹಿಳಾ ವೀಕ್ಷಕರು ಸಂಬರಗಿ ಅವರ ಸಾಧನೆಯನ್ನು ಹೇಗೆಲ್ಲಾ ಹೊಗಳಿದ್ದಾರೆ, ಯಾವುದೆಲ್ಲಾ ಬಿರುದು ಬಾವಳಿಗಳನ್ನು ಕೊಟ್ಟಿದ್ದಾರೆ ಅನ್ನೋದು ಗೊತ್ತಾಗಲಿದೆ.
Discussion about this post