ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಸ್ಪಷ್ಟವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆತಂಕ ಅಂದ್ರೆ ಗುಣಮುಖರಾಗಿ ಮನೆಗೆ ಮರಳುತ್ತಿರುವವರ ಸಂಖ್ಯೆ ಅಷ್ಟೇ ಪ್ರಮಾಣದಲ್ಲಿ ಕುಸಿತವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಬಹುದು.
ಶುಕ್ರವಾರ ಸಕ್ಕರೆ ನಾಡಿಗೆ ಕಹಿ ವಾರವಾಗಿದ್ದು, ಒಂದೇ 1348 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು 5 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಮೃತಪಟ್ಟವರ ವಯಸ್ಸು 62,54,47,31 ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಮೃತಪಟ್ಟ ಎಲ್ಲರಿಗೂ ತೀವ್ರ ಉಸಿರಾಟ ಸಮಸ್ಯೆಯಿದ್ದು, ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 216ಕ್ಕೆ ಏರಿದೆ. ಗಮನಾರ್ಹ ಅಂಶ ಅಂದ್ರೆ 1348 ಮಂದಿ ಪತ್ತೆಯಾಗಿದ್ದು ಕೇವಲ 4965 ಮಂದಿಯ ಪರೀಕ್ಷೆ ಮೂಲಕ.
ಇನ್ನು ಇಂದು ಪತ್ತೆಯಾಗಿರುವ 1348 ಸೋಂಕಿತರ ಪೈಕಿ ಮಂಡ್ಯ ತಾಲೂಕಿನಲ್ಲಿ 468, ಮದ್ದೂರಿನಲ್ಲಿ 169, ಮಳವಳ್ಳಿಯಲ್ಲಿ 208, ಪಾಂಡವಪುರದಲ್ಲಿ 138. ಶ್ರೀರಂಗಪಟ್ಟಣದಲ್ಲಿ 120, ಕೆ ಆರ್ ಪೇಟೆಯಲ್ಲಿ 72, ನಾಗಮಂಗಲದ 150 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಹೊರ ಜಿಲ್ಲೆಯಿಂದ ಬಂದ 22 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಪ್ರಸ್ತುತ ಜಿಲ್ಲೆಯಲ್ಲಿ 5720 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 624 ಮಂದಿ ಸರ್ಕಾರಿ ಆಸ್ಪತ್ರೆ, 190 ಮಂದಿ ಖಾಸಗಿ ಆಸ್ಪತ್ರೆ, 993 ಮಂದಿ ಕೋವಿಡ್ ಕೇರ್ ಸೆಂಟರ್ ಮತ್ತು 3913 ಮಂದಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು 814 ಮಂದಿ ಶುಕ್ರವಾರ ಕೊರೋನಾ ಗೆದ್ದು ಮನೆಗೆ ಮರಳಿದ್ದಾರೆ. ಈ ಮೂಲಕ ಕೊರೋನಾ ಗೆದ್ದವರ ಸಂಖ್ಯೆ 24525ಕ್ಕೆ ಏರಿದೆ.
Discussion about this post