ನವದೆಹಲಿ : ದೇಶದಲ್ಲಿ ಮದ್ಯ ಮಾರಾಟ ನಿಷೇಧವಾಗಬೇಕು, ತಂಬಾಕು, ಗುಟ್ಕಾ ಬ್ಯಾನ್ ಆಗಬೇಕು ಅನ್ನುವ ಆಗ್ರಹ ಇಂದು ನಿನ್ನೆಯದಲ್ಲ. ಆದರೆ ಅದು ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ಆಂಧ್ರ ಪ್ರದೇಶ ಸರ್ಕಾರ ಗಟ್ಟಿ ಮನಸ್ಸು ಮಾಡಿ ಗುಟ್ಕಾ ನಿಷೇಧಕ್ಕೆ ಮುಂದಾಗಿತ್ತು.
ಇದೀಗ ಆಹಾರ ಸುರಕ್ಷತಾ ಇಲಾಖೆಯ ಆಯುಕ್ತರು ಈ ಸಂಬಂಧ ಮತ್ತೆ ಆದೇಶ ಹೊರಡಿಸಿದ್ದು, ಇನ್ನು ಮುಂದಿನ ಒಂದು ವರ್ಷಗಳ ಕಾಲ ರಾಜ್ಯದಲ್ಲಿ ತಂಬಾಕು ಉತ್ಪನ್ನ ಉತ್ಪಾದನೆ, ವಿತರಣೆ ಮಾರಾಟವನ್ನು ನಿಷೇಧಿಸಿ ಆದೇಶಿಸಲಾಗಿದೆ. ಡಿಸೆಂಬರ್ 7ರಿಂದಲೇ ಈ ಆದೇಶ ಜಾರಿಯಾಗಲಿದೆ. ಆದೇಶದ ಪ್ರಕಾರ ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಮತ್ತು ಜಗಿಯಲಾದ ತಂಬಾಕು ವಸ್ತುಗಳ ಮೇಲೆ ನಿಷೇಧ ಹೇರಲಾಗಿದೆ.
ಕಳೆದ ಜನವರಿಯಲ್ಲೂ ಇಂತಹುದೇ ಆದೇಶ ಒಂದು ವರ್ಷಗಳ ಕಾಲದ ಮಟ್ಟಿಗೆ ಹೊರಡಿಸಲಾಗಿತ್ತು ಇದೀಗ ಅದೇ ಆದೇಶ ಮತ್ತೆ ಮುಂದುವರಿಯಲಿದೆ.
ಈ ಆದೇಶದ ಪ್ರಕಾರ ನಿಕೋಟಿನ್ ತುಂಬಿದ ಉತ್ಪನ್ನಗಳು ಯಾವುದೇ ಕಾರಣಕ್ಕೂ ಯಾವುದೇ ಹೆಸರಿನಲ್ಲಿ ಮಾರಾಟ ಮಾಡುವಂತಿಲ್ಲ. ಹಾಗೇ ಮಾಡಿದರೆ ಇದು ಅಪರಾಧವಾಗಿದ್ದು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
2013 ರಿಂದಲೇ ಆಂಧ್ರದಲ್ಲಿ ಗುಟ್ಕಾ ನಿಷೇಧಗೊಂಡಿತ್ತು. ಈ ನಡುವೆ ಗುಟ್ಕಾ ನಿಷೇಧ ಪ್ರಶ್ನಿಸಿ ಹೈಕೋರ್ಟ್ ನಲ್ಲಿ 160ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿತ್ತು. ಈಗ ಅವೆಲ್ಲವನ್ನೂ ಹೈಕೋರ್ಟ್ ವಜಾ ಮಾಡಿದ ಹಿನ್ನಲೆಯಲ್ಲಿ ಈ ಆದೇಶ ಹೊರ ಬಿದ್ದಿದೆ.
Discussion about this post