ನಾಗ್ಪುರ : ಬಾಂಗ್ಲಾದೇಶದ ಢಾಕಾದಿಂದ ಮಸ್ಕತ್ ಗೆ ಹೊರಟಿದ್ದ ‘ಬಿಮಾನ್ ಬಾಂಗ್ಲಾದೇಶ ಏರ್ ಲೈನ್ಸ್’ ಸಂಸ್ಥೆಗೆ ಸೇರಿದ ಪೈಲೆಟ್ ಗೆ ಆಕಾಶ ಮಾರ್ಗದಲ್ಲೇ ಹೃದಯಾಘಾತವಾಗಿದೆ. ಈ ಹೊತ್ತಿಗೆ ವಿಮಾನ ಛತ್ತೀಸ್ ಗಢದ ರಾಯಪುರದ ಆಕಾಶ ಮಾರ್ಗದಲ್ಲಿ ಪ್ರಯಾಣ ಬೆಳೆಸುತ್ತಿತ್ತು.
ಈ ವೇಳೆ ವಿಮಾನವನ್ನು ಕಂಟ್ರೋಲ್ ಗೆ ತೆಗೆದುಕೊಂಡ ಸಹ ಪೈಲೆಟ್, ಕೋಲ್ಕತ್ತಾ ವಿಮಾನ ನಿಲ್ದಾಣದ ಎಟಿಸಿಯನ್ನು ಸಂಪರ್ಕಿಸಿ ತುರ್ತು ಸಹಾಯಕ್ಕೆ ಮನವಿ ಸಲ್ಲಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ನಾಗ್ಪುರದಲ್ಲಿ ವಿಮಾನ ಲ್ಯಾಂಡ್ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ಸಹ ಪೈಲೆಟ್ ಶುಕ್ರವಾರ ಬೆಳಗ್ಗೆ 11.40ಕ್ಕೆ ವಿಮಾನವನ್ನು ನಾಗ್ಪುರದ ರನ್ ವೇ ನಲ್ಲಿ ಲ್ಯಾಂಡ್ ಮಾಡಿದ್ದಾರೆ. ಬೆನ್ನಲ್ಲೇ ಪೈಲೆಟ್ ಅವರನ್ನು ವಿಮಾನ ನಿಲ್ದಾಣದಿಂದ 10 ಕಿಮೀ ದೂರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಬಿಮಾನ್ ಬಾಂಗ್ಲಾದೇಶ ಏರ್ ಲೈನ್ಸ್’ ಸಂಸ್ಥೆ ಬದಲಿ ಪೈಲೆಟ್ ಅನ್ನು ನಾಗ್ಪುರಕ್ಕೆ ರವಾನಿಸಿದ ಬಳಿಕ ಶುಕ್ರವಾರ ರಾತ್ರಿ 10.37ಕ್ಕೆ ವಿಮಾನ ಮಸ್ಕತ್ ಕಡೆ ಪ್ರಯಾಣ ಬೆಳೆಸಿದೆ.
Discussion about this post