ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಸಕ್ಕರೆ ಹೀಗೆ ಆಹಾರ ಪದಾರ್ಥದಲ್ಲಿ ಪ್ಲಾಸ್ಟಿಕ್ ಅಬ್ಬರಿಸಿದ ರೀತಿಗೆ ಮಿತಿಯೆಲ್ಲಿದೆ. ಇದೀಗ ಪ್ಲಾಸ್ಟಿಕ್ ಉಪ್ಪಿನ ಸರದಿ. ಹಾಗಂತ ಅದು ಪ್ಲಾಸ್ಟಿಕ್ ಉಪ್ಪಲ್ಲ, ಬದಲಾಗಿ ಅದು ಉಪ್ಪಿನಲ್ಲಿ ಪ್ಲಾಸ್ಟಿಕ್ ಸೇರಿಕೊಳ್ಳುತ್ತಿದೆ.
ದೇಶದಲ್ಲಿ ಮಾರಾಟವಾಗುವ ಹಲವು ಪ್ರಮುಖ ಕಂಪೆನಿಗಳ ಟೇಬಲ್ ಸಾಲ್ಟ್ ಬ್ರ್ಯಾಂಡುಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶಗಳು ಪತ್ತೆಯಾಗಿವೆ ಎಂದು Indian Institute of Technology-Bombay ಯ ಎರಡು ಸದಸ್ಯರ ತಂಡ ನಡೆಸಿದ ಅಧ್ಯಯನ ತಿಳಿಸಿದೆ.
ಮುಖ್ಯವಾಗಿ ಸಮುದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಕೊಳೆತು ಸೇರಿಕೊಂಡಿರುವ ಪರಿಣಾಮವೇ ಅವುಗಳ ಅಂಶ ಉಪ್ಪಿನಲ್ಲಿ ಕಂಡು ಬರುತ್ತಿದೆ ಎಂದು ಸಂಶೋಧನೆ ತಿಳಿಸಿದೆ.
ಸಂಶೋಧನ ತಂಡವು ಪರೀಕ್ಷಿಸಿದ ಉಪ್ಪಿನ ಮಾದರಿಗಳಲ್ಲಿ 626 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಪತ್ತೆ ಹಚ್ಚಲಾಗಿದ್ದು, ಪತ್ತೆ ಹಚ್ಚಲಾದ ಮೈಕ್ರೋಪ್ಲಾಸ್ಟಿಕ್ ಕಣಗಳ ಪೈಕಿ ಶೇ 63ರಷ್ಟು ಅಂಶ ಚೂರು ಚೂರು ರೂಪದಲ್ಲಿ ಪತ್ತೆಯಾಗಿದ್ದರೆ ಶೇ 37ರಷ್ಟು ನಾರಿನ ರೂಪದಲ್ಲಿದೆ.
ಪರೀಕ್ಷೆಗೊಳಪಡಿಸಲಾದ ಪ್ರತಿ 1 ಕೆಜಿ ಉಪ್ಪಿನಲ್ಲಿ 63.76 ಮೈಕ್ರೋಗ್ರಾಂ ಅಥವಾ 0.063 ಮಿಲಿಗ್ರಾಂ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿದೆ.
ಪ್ರತಿ ದಿನ ವ್ಯಕ್ತಿಯೊಬ್ಬ 5 ಗ್ರಾಂ ಉಪ್ಪು ಸೇವಿಸುತ್ತಾರೆಂದು ಅಂದುಕೊಂಡರೆ ಸುಮಾರು 117 ಮೈಕ್ರೋಗ್ರಾಂ (0.117 ಮಿಲಿ ಗ್ರಾಂ) ಮೈಕ್ರೋಪ್ಲಾಸ್ಟಿಕ್ ಕೂಡ ಸೇವಿಸುತ್ತಾರೆಂದು ಈ ಆಧಯ್ಯನದಿಂದ ಕಂಡುಕೊಳ್ಳಲಾಗಿದೆ.
ಉಪ್ಪಿನಲ್ಲಿನ ಈ ಮೈಕ್ರೋಪ್ಲಾಸ್ಟಿಕ್ ಅಂಶಗಳು ಆರೋಗ್ಯಕ್ಕೆ ಹಾಗೂ ದೇಹಕ್ಕೆ ಹೇಗೆ ಹಾನಿಕಾರಕ ಅನ್ನುವ ಕುರಿತಂತೆ ಇನ್ನಷ್ಟೇ ಅಧ್ಯಯನ ನಡೆಯಬೇಕಿದೆ.
[youtube https://www.youtube.com/watch?v=Ho-k8PFKlzs&w=720&h=480]
Discussion about this post