ಮದುವೆಯಾದರೆ ಎಂದಿಗೂ ಮರೆಯದಂತಿರಬೇಕು ಎಂದು ಅನೇಕರು ವಿಶಿಷ್ಟವಾಗಿ ಮದುವೆಯಾಗುತ್ತಾರೆ. ವಿಮಾನದಲ್ಲಿ, ನೀರಿನಡಿ ಹೀಗೆ ಸಿಕ್ಕಾಪಟ್ಟೆ ಕ್ರಿಯೆಟಿವಿಟಿ ತೋರಿಸುವ ಮಂದಿ ಹೆಚ್ಚಾಗಿದ್ದಾರೆ.
ಆದರೆ ಮಧುಚಂದ್ರವೂ ಮರೆಯಲಾಗದ ಅನುಭವವಾಗಬೇಕು ಎಂದು ಬ್ರಿಟನ್ ದಂಪತಿ ಭಾರತದಲ್ಲಿ ಹನಿಮೂನ್ ಮಾಡಿ ಸಂಭ್ರಮಿಸಿದ್ದಾರೆ. ಅದು ಕೂಡಾ ರೈಲಿನಲ್ಲಿ ಅನ್ನುವುದು ವಿಶೇಷ .
ಭಾರತದ ಬಗ್ಗೆ ವಿಶೇಷ ಒಲವುಳ್ಳ ಬ್ರಿಟನ್ ಮೂಲದ ಗ್ರಹಾಮ್ ವಿಲಿಯಮ್ ಲಿನ್ ಹಾಗೂ ಸಿಲ್ವಿಯಾ ಪ್ಲಾಸಿಕ್ ಇದೀಗ ಹಳಿಗಳ ಮೇಲೆ ಹನಿಮೂನ್ ಮಾಡಿ ಗಮನ ಸೆಳೆದಿದ್ದಾರೆ.ಇದಕ್ಕಾಗಿ ಅವರು ಇಡೀ ರೈಲನ್ನು ಬುಕ್ ಮಾಡಿದ್ದರು ಅನ್ನುವುದು ವಿಶೇಷ.
ಇತ್ತೀಚೆಗಷ್ಟೇ ದಕ್ಷಿಣ ರೈಲ್ವೆಯ ಸೇಲಂ ವಿಭಾಗದ ನೀಲಗಿರಿ ಮೌಂಟೇನ್ ರೈಲ್ವೇಸ್ ‘ಚಾರ್ಟರ್ಡ್ ಸೇವೆ’ ಆರಂಭಿಸಿತ್ತು. ಇದು ಯುನೆಸ್ಕೋದ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ಟಾಯ್ ಟ್ರೇನ್ (ಉಗಿ ಬಂಡಿ).
ನೀಲಗಿರಿ ಮೌಂಟನ್ ರೈಲ್ವೆಯನ್ನು ಮತ್ತಷ್ಟು ಪ್ರಚಾರ ಮಾಡುವ ಉದ್ದೇಶದಿಂದ ಖಾಸಗಿ (ಚಾರ್ಟರ್ಡ್) ಸೇವೆಗೆ ಇತ್ತೀಚೆಗೆ ಮರು ಚಾಲನೆ ನೀಡಲಾಗಿತ್ತು. 1997ರಿಂದ 2000ನೇ ಇಸವಿ ಮಧ್ಯೆ ಕೂಡ ಚಾರ್ಟರ್ಡ್ ಸೇವೆ ಒದಗಿಸಲಾಗುತ್ತಿತ್ತು. ಕೆಲ ವರ್ಷ ನಿಂತು ಹೋಗಿದ್ದ ಸೇವೆ ನಂತರ 2002 ಮತ್ತು 2004ರ ಮಧ್ಯೆ ರಾತ್ರಿ ವೇಳೆ ಮೂರು ಬೋಗಿಗಳನ್ನು ಹೊಂದಿರುವ ಚಾರ್ಟರ್ಡ್ ರೈಲು ಸಂಚಾರ ಮಾಡುತ್ತಿತ್ತು. ನಂತರ 2018ರಲ್ಲಿ ಮತ್ತೆ ಚಾಲನೆ ಸಿಕ್ಕಿದೆ.
ಇದೇ ರೈಲಿನ ಇಡೀ ಮೂರು ಬೋಗಿಗಳನ್ನು ಹನಿಮೂನ್ ಉದ್ದೇಶಕ್ಕಾಗಿ ಬುಕ್ ಮಾಡಿ, ಪ್ರಯಾಣ ಮಾಡುವ ಮೂಲಕ ಜೋಡಿ ಮಧುಚಂದ್ರವನ್ನು ವಿಶೇಷವಾಗಿ ಆಚರಿಸಿದೆ. ಇದಕ್ಕಾಗಿ ಬರೋಬ್ಬರಿ 2.85 ಲಕ್ಷ ರೂ. ಪಾವತಿಸಿರುವ ದಂಪತಿ ಶುಕ್ರವಾರ ಮೆಟ್ಟುಪಾಳ್ಯಂನಿಂದ ಬೆಳಗ್ಗೆ 9.10ಕ್ಕೆ ಹೊರಟು 2.20ಕ್ಕೆ ಊಟಿ ತಲುಪಿದರು.
5 ಗಂಟೆಗಳ ಪ್ರಯಾಣ ಕಾಲದಲ್ಲಿ 13 ಸುರಂಗಗಳು, ಹಚ್ಚ ಹಸಿರಿನ ಕಾಫಿತೋಟ, ನೀಲಗಿರಿ ಬೆಟ್ಟಗಳ ಸೌಂದರ್ಯವನ್ನು ಸವಿಯುವ ಅವಕಾಶವಿದೆ.
Discussion about this post