ಸುದೀಪ್ ಅಭಿನಯದ ವಿಲನ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅಮಾನವೀಯ ವರ್ತನೆ ತೋರಿದ್ದ ಅಭಿಮಾನಿಗಳು ಸುದೀಪ್ ಕಟೌಟ್ಗೆ ಮೇಕೆ ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿ ಕೌರ್ಯ ಮೆರೆದಿದ್ದರು.
ನೆಲಮಂಗಲದಲ್ಲಿ ಈ ಘಟನೆ ನಡೆದಿತ್ತು ಎಂದು ಆಗ ಹೇಳಲಾಗಿತ್ತು. ಅಂದು ಅಭಿಮಾನಿಗಳು ಮಾರಕಾಸ್ತ್ರಗಳನ್ನು ಬಳಸಿ ಮೇಕೆ ಬಲಿಕೊಟ್ಟು ಸುದೀಪ್ ಕಟೌಟ್ಗೆ ರಕ್ತದ ಅಭಿಷೇಕ ಮಾಡಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮಾತ್ರವಲ್ಲದೆ ಕೋಣವೊಂದನ್ನು ಬಲಿಕೊಟ್ಟು ರಕ್ತದ ಅಭಿಷೇಕ ಮಾಡಿದ್ದ ದೃಶ್ಯ ಆ ಸಂದರ್ಭದಲ್ಲಿ ಸಾಕಷ್ಟು ಸದ್ದು ಮಾಡಿತ್ತು.
ಆ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಸುದೀಪ್ “ಈ ರೀತಿಯ ಕೃತ್ಯಗಳನ್ನು ನಡೆಸುತ್ತಿರುವುದು ನಿಜಕ್ಕೂ ಅಮಾನವೀಯ. ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಇದನ್ನು ನಿಲ್ಲಿಸಿ. ವಿಲನ್ ಚಿತ್ರತಂಡ ನಿಮ್ಮ ಈ ರೀತಿಯ ಪ್ರೀತಿ ಹಾಗೂ ಗೌರವ ನೋಡಲು ಇಷ್ಟಪಡುವುದಿಲ್ಲ. ದಯವಿಟ್ಟು ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ಕೋರಿದ್ದರು.
ಅತ್ತ ವಿಲನ್ ಚಿತ್ರ ಮಂದಿರದಿಂದ ಮರೆಯಾಗುತ್ತಿದ್ದಂತೆ ಸುದೀಪ್ ಮಾಡಿದ ಮನವಿಯೂ ಅಭಿಮಾನಿಗಳ ಮನಸ್ಸಿನಿಂದ ಮಾಯವಾಗಿತ್ತು.
ಇದೀಗ ಪೈಲ್ವಾನ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಸುದೀಪ್ ಅಭಿಮಾನಿಗಳು ಮತ್ತೆ ಕ್ರೌರ್ಯ ಮೆರೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ಚಳ್ಳಕೆರೆ ತಾಲೂಕುಗಳ ನಡುವೆ ಇರುವ ಮಲೇ ಬೋರನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಅಭಿಮಾನಿಗಳು ಸುದೀಪ್ ಅವರ ಪೋಸ್ಟರ್ಗೆ ಕುರಿ ಕಡಿದು ರಕ್ತಾಭಿಷೇಕ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಗಂತ ಈ ವಿಷಯದಲ್ಲಿ ಸುದೀಪ್ ಅವರನ್ನು ದೂರುವ ಹಾಗಿಲ್ಲ. ಸುದೀಪ್ ಅವರು ಅಭಿಮಾನಿಗಳ ಮನೆ ಬಾಗಿಲಿಗೆ ಹೋಗಿ ಮನವೊಲಿಸುವುದು ಅಸಾಧ್ಯ. ಕನಿಷ್ಟ ಪಕ್ಷ ಸುದೀಪ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿಕೊಂಡ ಮನವಿಯನ್ನು ಅಭಿಮಾನಿಗಳು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.
Discussion about this post