ರಾಜಕೀಯ ಅನ್ನುವ ಚದುರಂಗದಾಟದಲ್ಲಿ Daily Sunday ಆಗಿರುವುದಿಲ್ಲ. ದಿನ ಬದಲಾಗುತ್ತಿರುತ್ತದೆ. ಆದರೆ ವಂಶ ಆಡಳಿತವನ್ನು ನೆಚ್ಚಿಕೊಂಡಿದ್ದ ಕಾಂಗ್ರೆಸ್ ಅಧಿಕಾರ ಅನ್ನುವ ಕುದುರೆಯ ಲಗಾಮು ತನ್ನ ಕೈಯಲ್ಲಿರುತ್ತದೆ ಅಂದುಕೊಂಡಿತ್ತು. ಆದರೆ ರಾಜಕೀಯ ಅನ್ನುವ ಕುದುರೆ ಎಂದಿಗೂ ಒಂದೇ ಜಾಕಿಯನ್ನು ಒಪ್ಪಿಕೊಳ್ಳುವುದಿಲ್ಲ. ಜಾಕಿ ಬದಲಾದರೆ ಕುದುರೆಗೆ ಓಡೋ ಹುಮ್ಮಸ್ಸು ಸಿಕ್ಕಾಪಟ್ಟೆ.
ಅದು ಈಗಾಗಲೇ ಸಾಬೀತಾಗಿದೆ. ಆದರೆ ಇವತ್ತು ನಾವು ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯವಾಗಿ ತನ್ನ ಸಮಾಧಿಯನ್ನು ತಾನೇ ಹೇಗೆ ಕಟ್ಟಿಕೊಂಡಿತು ಅನ್ನುವುದನ್ನು ಹೇಳುತ್ತೇವೆ.
ಆಂಧ್ರ ಪ್ರದೇಶದ ಮಟ್ಟಿಗೆ ಕಾಂಗ್ರೆಸ್ ಅಂದ್ರೆ ವೈಎಸ್ ರಾಜಶೇಖರ ರೆಡ್ಡಿ, ವೈಎಸ್ಆರ್ ಅಂದ್ರೆ ಕಾಂಗ್ರೆಸ್ ಅನ್ನುವ ಕಾಲವದು. ತೆಲುಗು ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ರಾಜಕೀಯವಾಗಿ ಬೆಳೆಯಲು ಪ್ರಯತ್ನಿಸುತ್ತಿದ್ದರು. ಪ್ರಾದೇಶಿಕ ಪಕ್ಷದ ಹೆಸರಿನಲ್ಲಿ ಅಧಿಕಾರಿದ ಕುದುರೆ ಏರುವ ಹುಮ್ಮಸ್ಸು.
ಆದರೆ ಕೆಸಿಆರ್ ಪ್ರಯತ್ನಕ್ಕೆ ಅಡ್ಡಿಯಾಗಿದ್ದು ನಾಯ್ಡು, ಹೀಗಾಗಿ ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟವನ್ನು ಕೆಸಿಆರ್ ಪ್ರಾರಂಭಿಸಿದರು. ಕೊನೆಗೆ ಅದರಲ್ಲಿ ಯಶಸ್ವಿಯೂ ಆದರು. ಇದು ಈಗ ಇತಿಹಾಸ,
ಆದರೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಮಗುವಿನಂತೆ ಕಾಪಾಡಿದ ವೈಎಸ್ ರಾಜಶೇಖರ ರೆಡ್ಡಿ ಕುಟುಂಬ ಹಿಂದೊಮ್ಮೆ ಘೋರ ಅವಮಾನ ಎದುರಿಸಿತ್ತು..
ಸರಿಯಾಗಿ ಒಂಬತ್ತು ವರ್ಷಗಳ ಹಿಂದೆ ಅಂದ್ರೆ 2010ರಲ್ಲಿ ತಂದೆಯ ಅಕಾಲಿಕ ಮರಣದ ನಂತರ ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ತಾಯಿ ವೈಎಸ್ ವಿಜಯಮ್ಮ ಹಾಗೂ ತಂಗಿ ಶರ್ಮಿಳಾ ಹೈದರಬಾದ್ನಿಂದ ನೇರ ದೆಹಲಿಗೆ ತೆರಳುತ್ತಾರೆ. ದೆಹಲಿಯ ಜನಪಥ್ ನಲ್ಲಿದ್ದ ಸೋನಿಯಾ ಗಾಂಧಿರ ನಿವಾಸದ ಬಾಗಿಲು ಬಡಿಯುತ್ತಾರೆ. ಆಗ ಸೋನಿಯಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರು.
ಪತಿಯ ಅಗಲಿಕೆಯಿಂದ ಆತಂಕಕ್ಕೀಡಾಗಿದ್ದ ವೈಎಸ್ ವಿಜಯಮ್ಮ ಮತ್ತು ಮಗಳು ಶರ್ಮಿಳಾ ಸೋನಿಯಾ ಗಾಂಧಿಯವರಿಂದ ಸಾಂತ್ವಾನ ಬಯಸಿ ಬಂದಿದ್ದರು. ಸಹಜವಾಗಿಯೇ ತಮ್ಮ ಪಕ್ಷದ ಅಧ್ಯಕ್ಷರ ಭೇಟಿಗೆ ಬಂದಿದ್ದ ಇವರಿಗೆ ಒಳ್ಳೆಯ ಸ್ವಾಗತ ಸಿಗುವ ನಿರೀಕ್ಷೆ ಇತ್ತು. ಆದರೆ, ಸೋನಿಯಾ ಗಾಂಧಿಯವರ ನಿವಾಸಕ್ಕೆ ಕಾಲಿಟ್ಟರೆ ನಿರೀಕ್ಷೆ ಹುಸಿಯಾಗಿತ್ತು. ಸಿಕ್ಕಿದ್ದು ಸ್ವಾಗತವಲ್ಲ ಅವಮಾನ.
ಸೋನಿಯಾ ಗಾಂಧಿಯವರನ್ನು ಭೇಟಿಯಾಗಲು ಸುಮಾರು 10 ರಿಂದ 15 ನಿಮಿಷ ಕಾಯಬೇಕಾಗುತ್ತದೆ. ನಂತರ ವಿಜಯಮ್ಮ ಅವರನ್ನು ಎದುರುಗೊಂಡ ಸೋನಿಯಾ ಗಾಂಧಿ ಸರಿಯಾಗಿ ಸ್ವಾಗತಿಸುವುದಿಲ್ಲ. ಅತಿಥಿ ಸತ್ಕಾರವೂ ಮಾಡುವುದಿಲ್ಲ.
ಈ ಮುನ್ನ ವೈಎಸ್ ರಾಜಶೇಖರ ರೆಡ್ಡಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದರು. ಅಂದು ವೈಎಸ್ ರಾಜಶೇಖರ ರೆಡ್ಡಿ ಅಕಾಲಿಕ ಸಾವಿನ ಬೆನ್ನಲ್ಲೇ ಆಂಧ್ರ ಪ್ರದೇಶ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಸಂಘರ್ಷ ಏರ್ಪಟ್ಟಿತ್ತು. ರಾಜಶೇಖರ ರೆಡ್ಡಿ ಸಾವಿನ ಸುದ್ದಿ ಕೇಳಿದ ಕೂಡಲೇ ಅಭಿಮಾನಿಗಳು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಲು ಜಗನ್ ಈ ಓದಾರ್ಪು ಯಾತ್ರೆ ಕೈಗೊಂಡಿರುತ್ತಾರೆ.
ಆದರೆ ಈ ಯಾತ್ರೆ ಸೋನಿಯಾ ಗಾಂಧಿ ನಿದ್ದೆಗೆಡಿಸಿತ್ತು. ಎಲ್ಲಿ ಜಗನ್ ರಾಹುಲ್ ಗಾಂಧಿಯನ್ನು ಬೆಳೆದು ಬಿಡುತ್ತಾನೋ ಅನ್ನುವ ಆತಂಕ ಕಾಡಿತ್ತು. ಹೀಗಾಗಿ ಸುತ್ತಿ ಬಳಸದೆ ನೇರ ವಿಷಯಕ್ಕೆ ಬಂದ ಸೋನಿಯಾ ಗಾಂಧಿ ಶಕ್ತಿಪ್ರ ದರ್ಶನ ಮಾಡಲು ಮುಂದಾಗಿದ್ದ ಜಗನ್ ‘ಓದಾರ್ಪು ಯಾತ್ರೆ’ ನಿಲ್ಲಿಸಬೇಕು. ನಿಮ್ಮ ಮಗನಿಗೆ ಕೂಡಲೇ ಯಾತ್ರ ನಿಲ್ಲಿಸುವಂತೆ ಸೂಚಿಸಿ ಎಂದು ವಿಜಯಮ್ಮನಿಗೆ ಆದೇಶಿಸುತ್ತಾರೆ.
ಓದಾರ್ಪು ಯಾತ್ರೆ ಹಿಂದಿನ ಉದ್ದೇಶವನ್ನು ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಲು ಯತ್ನಿಸಿದರೂ ಪ್ರಯೋಜನವಾಗುವುದಿಲ್ಲ. ವಿಜಯಮ್ಮ ಮತ್ತು ಶರ್ಮಿಳಾ ರೆಡ್ಡಿ ಮಾತು ಕೇಳಲೂ ಸೋನಿಯಾ ಗಾಂಧಿರು ಸಿದ್ಧರಿರಲಿಲ್ಲ. ಸೋನಿಯಾ ಗಾಂಧಿಯವರ ದರ್ಪದ ಮಾತುಗಳನ್ನು ಕೇಳಿದ ವಿಜಯಮ್ಮ ಮತ್ತು ಶರ್ಮಿಳಾ ಹೈದರಾಬಾದ್ಗೆ ಮರಳುತ್ತಾರೆ.
ತಾಯಿ ತಂಗಿಗೆ ತಂದೆ ಕಟ್ಟಿ ಬೆಳೆಸಿದ ಪಕ್ಷದ ಅಧಿನಾಯಕಿಯಿಂದ ಆದ ಅವಮಾನ ಸುದ್ದಿ ತಿಳಿಯುತ್ತದೆ. ಹಿಂದೆ ಮುಂದೆ ನೋಡುವುದಿಲ್ಲ, ಕಾಂಗ್ರೆಸ್ ತೊರೆಯವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಾಂಗ್ರೆಸ್ ತೊರೆದ ನಂತರ ಹೊಸ ಪಕ್ಷವೊಂದನ್ನು ಸ್ಥಾಪಿಸುತ್ತೇನೆ ಅಂದ ಜಗನ್ ವೈಎಸ್ಆರ್ ಕಾಂಗ್ರೆಸ್ ಅನ್ನೋ ಪಕ್ಷ ಸ್ಥಾಪಿಸುತ್ತಾರೆ.
ತಂದೆಯ ನಿಧನ ನಂತ್ರ ಜಗನ್ ಗೆ ಮುಖ್ಯಮಂತ್ರಿ ಪಟ್ಟ ದಕ್ಕಿರಲಿಲ್ಲ. ಅದನ್ನು ಸಹಿಸಿಕೊಂಡರೆ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಸಿಕ್ಕಿದ್ದು ಅವಮಾನ.
ಒಂದು ಕಡೆ ಜಗನ್ ಪ್ರತ್ಯೇಕ ಪಕ್ಷ, ಮತ್ತೊಂದು ಕಡೆ ಕೆಸಿಆರ್ ಪ್ರತ್ಯೇಕ ರಾಜ್ಯ ಹೋರಾಟ ಇನ್ನೊಂದು ಕಡೆ ಆಂಧ್ರದ ಸಿಎಂ ಆಗಿದ್ದ ರೋಶಯ್ಯ ನೇತೃತ್ವದಲ್ಲಿ ರಾಜ್ಯ ಮಕಾಡೆ ಮಲಗುವತ್ತ ಸಾಗಿತ್ತು.
ವೈಎಸ್ಆರ್ ಕಾಂಗ್ರೆಸ್ ವಿರೋಧದ ನಡುವೆ ಆಗಿನ ಕೇಂದ್ರ ಸರ್ಕಾರ ಆಂಧ್ರವನ್ನು ರಾಜಕೀಯ ಲಾಭಕ್ಕಾಗಿ ಭಾಗ ಮಾಡಿತು. ಕಾಂಗ್ರೆಸ್ ಆಡಳಿತ ಅಂತ್ಯವಾಗಿ ಒಂದು ಕಡೆ ನಾಯ್ಡ ಅಧಿಕಾರಕ್ಕೆ ಬಂದರೆ ಮತ್ತೊಂದು ಕಡೆ ಕೆಸಿಆರ್ ಅಧಿಕಾರ ಚುಕ್ಕಾಣಿ ಹಿಡಿದರು.
ಈ ನಡುವೆ ಜಗನ್ ಪಾರುಪತ್ಯವನ್ನು ಮುಗಿಸಲೇಬೇಕು ಅನ್ನುವ ಸಲುವಾಗಿ ಷಡ್ಯಂತ್ರ ಹೂಡಲಾಗಿತ್ತು. ಅಕ್ರಮ ಆಸ್ತಿ ಸೇರಿದಂತೆ ಜಗನ್ ಮೋಹನ್ ವಿರುದ್ಧ ಸುಮಾರು 20ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಾಯ್ತು.
ಜಗನ್ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದು, ಸಿಬಿಐ ಮೂಲಕ, 18 ತಿಂಗಳು ಜೈಲು ಪಾಲು ಮಾಡಿದ್ದು ಹೀಗೆ ಹಲವು ಬ್ರಹ್ಮಾಸ್ತ್ರಗಳನ್ನು ಬಿಟ್ಟಿದ್ದು ಇದೇ ಸೋನಿಯಾ ಗಾಂಧಿ ಎಂಬುದು ಈಗ ಇತಿಹಾಸ
ಜಗನ್ ಜೈಲು ಸೇರಿದಾಗ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಉಸಿರು ಕಾಪಾಡಿಕೊಳ್ಳಲು ತಾಯಿ ವಿಜಯಮ್ಮ ಮತ್ತು ಪತ್ನಿ ಭಾರತಿ ರೆಡ್ಡಿ ಹೆಣಗಾಡಿದರು.
2012ರ ಮೇ ತಿಂಗಳಲ್ಲಿ ಸಿಬಿಐನಿಂದ ಬಂಧನಕ್ಕೀಡಾದ ಜಗನ್ ಬರೊಬ್ಬರಿ 18 ತಿಂಗಳ ಬಳಿಕ ಬಿಡುಗಡೆಯಾದರು. ಜಗನ್ ಬಿಡುಗಡೆ ಹೊತ್ತಿಗೆ ಆಂಧ್ರ ಪ್ರದೇಶದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟ ತಾರಕಕ್ಕೇರಿತ್ತು. ಈ ಹೊತ್ತಿನಲ್ಲಿ ತಮ್ಮ ತಂದೆ ರಾಜಶೇಖರ ರೆಡ್ಡಿ ಅವರ ಹೊಂದಿದ್ದ ನಿಲುವನ್ನೇ ಹಿಂಬಾಲಿಸಿದ ಜಗನ್ ಆಂಧ್ರ ಪ್ರದೇಶ ವಿಭಜನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದರು.
ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಪಕ್ಷ ಪ್ರತ್ಯೇಕ ತೆಲಂಗಾಣ ರಾಜ್ಯ ಘೋಷಣೆ ಮಾಡಿತ್ತು. ನಂತ್ರ 2014ರಲ್ಲಿ ನಡೆದ ವಿಭಜಿತ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಗನ್ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮುಂದೆ ಮಂಡಿಯೂರಿತ್ತು. ಅಂದಿನ ಚುನಾವಣೆಯಲ್ಲಿ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಟಿಡಿಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಪರಿಣಾಮ ಭರ್ಜರಿ ಗೆಲುವಿನೊಂದಿಗೆ ಟಿಡಿಪಿ ಅಧಿಕಾರದ ಗದ್ದುಗೆಗೆ ಏರಿತ್ತು.
ಆರದ ಹಳೆಯ ಗಾಯಕ್ಕೆ ಮದ್ದು ಅರೆಯಲೇಬೇಕು, ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್ ಮಡಿಲು ಸೇರಿರುವ ಚಂದ್ರಬಾಬು ನಾಯ್ಡು ಮತ್ತು ನಾಯ್ಡು ಅವರನ್ನು ಅಪ್ಪಿಕೊಂಡಿರುವ ಕಾಂಗ್ರೆಸ್ ಅನ್ನು ಸೋಲಿಸಲೇಬೇಕು ಎಂದು ನಿರ್ಧರಸಿದ್ದ ರೆಡ್ಡಿ 2017ರಿಂದಲೇ 2019ರ ವಿಧಾನಸಭೆ ಚುನಾವಣೆಗೆ ರಣತಂತ್ರ ಹೆಣೆಯಲು ಆರಂಭಿಸಿದ ಜಗನ್, ತಂದೆಯಂತೆಯೇ ಆಂಧ್ರ ಪ್ರದೇಶದಾದ್ಯಂತ ಪಾದಯಾತ್ರೆ ನಡೆಸಿದರು. ಬರೊಬ್ಬರಿ 3,641 ಕಿ.ಮೀ ಪಾದಯಾತ್ರೆ ನಡೆಸಿದ ಜಗನ್ ಆಂಧ್ರ ಪ್ರದೇಶದ 13 ಜಿಲ್ಲೆಗಳ ಪ್ರತೀ ಹಳ್ಳಿಗೂ ಭೇಟಿ ನೀಡಿ ಗ್ರಾಮೀಣ ವಾಸಿಗಳ ಕಷ್ಟ ಸುಖ ಆಲಿಸಿದರು.
ಇದರ ಫಲವಾಗಿ ಜನ ವೈಟ್ ಗಡ್ಡಧಾರಿ ಚಂದ್ರಬಾಬು ನಾಯ್ಡು ಅವರನ್ನು ತಿರಸ್ಕರಿಸಿದ ಜನ ವೈಎಸ್ಆರ್ ಹೆಸರಿನ ಬುದ್ದಿವಂತ ರಾಜಕಾರಣಿಯ ಪುತ್ರನನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ.
ಹಾಗಾದರೆ ಜಗನ್ ಜನರ ಎಲ್ಲಾ ಕನಸುಗಳನ್ನು ಈಡೇರಿಸುತ್ತಾರೆಯೇ ಸಾಧ್ಯವೇ ಇಲ್ಲ. ಚಂದ್ರಬಾಬು ನಾಯ್ಡು ಮಹಾಘಟಬಂಧನ್ ಹೆಸರಿನ ಪ್ರವಾಸಕ್ಕೆ ಬೊಕ್ಕಸ ಖಾಲಿ ಮಾಡಿದ್ದಾರೆ.
ಹೊಸ ರಾಜಧಾನಿ ಅಮರಾವತಿಯಲ್ಲಿ ಈಗಲೂ ನಿರ್ಮಾಣ ಕಾರ್ಯಗಳು ನಿಧಾನ ಗತಿಯಲ್ಲೇ ಸಾಗುತ್ತಿವೆ. ಚುನಾವಣೆ ಪ್ರಚಾರದ ವೇಳೆ ಎಲ್ಲ ವರ್ಗಕ್ಕೂ ಒಂದಲ್ಲ ಒಂದು ಭರವಸೆ ನೀಡಿರುವ ಜಗನ್, ಸಂಪನ್ಮೂಲ ಕೊರತೆ ಎದುರಿಸುತ್ತಿರುವ ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆಯೂ ಇದೆ.
ಆದರೆ ಜಗನ್ ಮೇಲೆ ಮೋದಿ ಆಶೀರ್ವಾದ ಇದೆ. ಹೀಗಾಗಿ ಆಂಧ್ರಕ್ಕೆ ಸಂಕಷ್ಟ ದೂರದ ಮಾತು. ಸಮಸ್ಯೆ ಇರೋದು ಕರ್ನಾಟಕಕ್ಕೆ.
Discussion about this post