ಚಂದನವನದ ನಟಿಯರು ರಾಜಕೀಯ ಪ್ರವೇಶ ಮಾಡುವುದು ಹೊಸದೇನಲ್ಲ. ಆದರೆ ತಾರಾ, ಶೃತಿ, ಮಾಳವಿಕಾ ಅವಿನಾಶ್, ಉಮಾಶ್ರೀ, ಜಯಮಾಲ ತಲೆಮಾರಿನ ನಟಿಯರು ರಾಜಕೀಯ ಪ್ರವೇಶ ಮಾಡಿದ್ದು ಮತ್ತು ಅವರು ಯಶಸ್ವಿಯಾದ ರೀತಿಯೇ ಬೇರೆ.
ಆದಾದ ನಂತ್ರ ರಮ್ಯ ರಾಜಕೀಯ ಪ್ರವೇಶಿಸಿ ಎತ್ತರಕ್ಕೆ ಏರಿದ್ದು ಇತಿಹಾಸ. ಈ ನಡುವೆ ರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಸೇರಿದ್ದ ರಕ್ಷಿತಾ ಸದ್ದಿಲ್ಲದೆ ರಾಜಕೀಯದಿಂದ ಹೊರಬಂದ್ರು. ಇನ್ನು ಪೂಜಾ ಗಾಂಧಿ ರಾಜಕೀಯದಲ್ಲಿ ಜಂಪಿಂಗ್ ಸ್ಟಾರ್ ಆಗಿದ್ದಾರೆ.
ಇದೀಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ರಾಜಕೀಯ ಸೇರುತ್ತಾರೆ ಅನ್ನುವ ಸುದ್ದಿ ಬಂದಿದೆ.
ಕಳೆದ ವಾರವಷ್ಟೇ ರಾಗಿಣಿ ಅವರು ಬಿಜೆಪಿಯ ಕರ್ನಾಟಕ ಉಸ್ತುವಾರಿ ಮುರಳೀಧರ್ ರಾವ್ ಅವರನ್ನು ಭೇಟಿ ಮಾಡಿದ್ದರು. ಅವರ ಮೂಲಕವೇ ರಾಗಿಣಿ ಅವರು ಬಿಜೆಪಿಯ ರಂಗ ಪ್ರವೇಶ ಮಾಡಲಿದ್ದಾರಂತೆ.
ಬಿಜೆಪಿ ಸೇರಿದ ಬೆನ್ನಲ್ಲೇ ರಾಗಿಣಿ ದ್ವಿವೇದಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ ಅನ್ನುವ ಸುದ್ದಿಗಳು ಕೂಡಾ ಕೇಳಿ ಬಂದಿದೆ.
ಅತ್ತ ರಾಗಿಣಿ ಪಾರ್ಟಿಗೆ ಬರ್ತಾರಂತೆ ಅನ್ನುವ ಸುದ್ದಿ ಸಿಕ್ಕ ಬೆನ್ನಲ್ಲೇ ಕೆಲ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮೋದಿ ಅಲೆಯಲ್ಲಿ ಪಕ್ಷ ಒಂದು ಹಂತದಲ್ಲಿದೆ. ಮೊನ್ನೆ ಮೊನ್ನೆ ಹೋಟೆಲ್ನಲ್ಲಿ ನಟಿ ರಾಗಿಣಿ ಅವರು ರಂಪಾಟ ಮಾಡಿ ಸುದ್ದಿಯಾಗಿದ್ದರು.
ಗೆಳೆಯರ ವಿಚಾರಕ್ಕಾಗಿ ನಡೆದ ಕಿತ್ತಾಟ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಅವರು ಪಾರ್ಟಿಗೆ ಬಂದ್ರೆ ಮತ್ತೆ ಅದೇ ರಂಪಾಟ ಸುದ್ದಿಗೆ ಜೀವ ಬರುತ್ತದೆ. ಜೊತೆಗೆ ವಿವಾದಿತ ನಟಿಯನ್ನು ಪಾರ್ಟಿಗೆ ಸೇರಿಸಿಕೊಂಡ್ರು ಎಂದು ಮಾಧ್ಯಮಗಳು ವರದಿ ಮಾಡ್ತಾವೆ. ಹೀಗಾಗಿ ಲೋಕಸಭೆ ಚುನಾವಣೆ ಮುಗಿಯಲಿ ಅಮೇಲೆ ಸೇರಿಸಿಕೊಳ್ಳಿ ಎಂದು ಕೈ ಮುಗಿದಿದ್ದಾರಂತೆ.
Discussion about this post